ಕಲಬುರಗಿ| ನಿರಾಶ್ರಿತರಿಗೆ ಆಶ್ರಯ: ಡೇ-ನಲ್ಮ್ ಯೋಜನೆಯಡಿ ಕಲಬುರಗಿ ನಗರದಲ್ಲಿ 4 ಕೇಂದ್ರ ಕಾರ್ಯನಿರ್ವಹಣೆ

ಕಲಬುರಗಿ: ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ-ನಲ್ಮ್) ಕಲಬುರಗಿ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಮೂರು ಪುರುಷ ಮತ್ತು ಒಂದು ಮಹಿಳಾ ಸೇರಿದಂತೆ 4 ನಿರಾಶ್ರಿತರ ಆಶ್ರಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ನಿರಾಶ್ರಿತರಿಗೆ ಸಕಲ ಮೂಲಸೌಕರ್ಯ ಒದಗಿಸಲಾಗುತ್ತಿದೆ.
ಮನೆ ಇಲ್ಲದೆ ಬೀದಿ ಬದಿ, ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ವಾಸಿಸುವ ನಿರಾಶ್ರಿತರಿಗೆ ರಾತ್ರಿ ಸಮಯದಲ್ಲಿ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು ಕಲಬುರಗಿ ಮಹಾನಗಾರ ಪಾಲಿಕೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಿರಾಶ್ರಿತರ ಆಶ್ರಯ ಕೇಂದ್ರ ತೆರೆದಿದೆ.
ಈ ನಿರಾಶ್ರಿತರ ಆಶ್ರಯ ಕೇಂದ್ರದಲ್ಲಿ ಮಲಗಲು ಮೆತ್ತನೆ ಹಾಸಿಗೆ, ತಲೆದಿಂಬು, ಮಂಚದ ಸೌಲಭ್ಯ ಉಂಟು. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇದೆ. ಸ್ನಾನಕ್ಕಾಗಿ ಬಿಸಿ ನೀರಿನ ವ್ಯವಸ್ಥೆ ಮತ್ತು ಸ್ನಾನದ ಕೋಣೆಗಳ ಜೊತೆಗೆ ಮನೋರಂಜನೆ ಟಿ.ವಿ. ಸೌಲಭ್ಯಗಳಿವೆ.
ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಕೊರೆಯುವ ಚಳಿ ಹೆಚ್ಚಾಗಿರುವುದರಿಂದ ವಸತಿ ರಹಿತ ನಿರಾಶ್ರಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ವೃತ್ತದಲ್ಲಿ ರಾತ್ರಿ ವಾಸಿಸುವ ನಿರಾಶ್ರಿತರನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರ ಸೂಚನೆ ಹಿನ್ನೆಲೆಯಲ್ಲಿ ಪಾಲಿಕೆಯ ಡೇ-ನಲ್ಮ್ ಸಿಬ್ಬಂದಿಗಳು ರಾತ್ರಿ 12 ಗಂಟೆವರೆಗೂ ನಗರ ಸುತ್ತಾಡಿ ನಿರಾಶ್ರಿತರನ್ನು ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಪ್ರಸ್ತುತ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಕೇಂದ್ರದಲ್ಲಿ ಸುಮಾರು 200 ಜನ ನಿರಾಶ್ರಿತರಿಗೆ ಇರಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ನಿರಾಶ್ರಿತರ ಗಮನ ಸೆಳೆಯಲು ಪ್ರಮುಖ ವೃತ್ತದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ಪ್ರಚಾರ ಕಾರ್ಯ ಸಹ ಪಾಲಿಕೆಯಿಂದ ಮಾಡಲಾಗುತ್ತಿದೆ.







