ಕಲಬುರಗಿ | ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಕಿರು ಪುಸ್ತಕ, ಮೈಕ್ರೋ ಝೆರಾಕ್ಸ್ ಬಳಕೆ ನಿಷೇಧಿಸಿ ಡಾ.ಆಕಾಶ್ ಎಸ್. ಆದೇಶ

ಕಲಬುರಗಿ : ಎಸೆಸೆಲ್ಸಿ ಪರೀಕ್ಷೆ-2025ನ್ನು ಪಾರದರ್ಶಕ ಮತ್ತು ನಕಲು ರಹಿತ ಪರೀಕ್ಷೆಯನ್ನಾಗಿಸುವ ನಿಟ್ಟಿನಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಅನ್ವಯಿಸುವಂತೆ ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಕಿರು ಪುಸ್ತಕಗಳನ್ನು ಹಾಗೂ ಮೈಕ್ರೋ ಝೆರಾಕ್ಸ್ ಗಳನ್ನು ಮಾರಾಟ ಮಾಡುವುದು, ಖರೀದಿ ಮಾಡುವುದು ಹಾಗೂ ಶಾಲಾ ಆವರಣದಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಎಸ್. ಅವರು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಗೆ ಕಿರು ಪುಸ್ತಕ, ಮೈಕ್ರೋ ಬುಕ್ ಮತ್ತು ಝೆರಾಕ್ಸ್ ಗಳನ್ನು ವಿದ್ಯಾರ್ಥಿಗಳು ಶಾಲೆಯಲ್ಲಿ ಬಳಸುವುತ್ತಿರುವುದನ್ನು ಗಮನಿಸಲಾಗಿದ್ದು, ಇದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966 ಮತ್ತು ಸರ್ಕಾರದ ಆದೇಶ ಮಾ.18, 2020ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ನಿಯಮ ಬಾಹಿರ ಕ್ರಮಗಳನ್ನು ಅನುಸರಿಸಿದಲ್ಲಿ ಮತ್ತು ಪ್ರಸಂಗಗಳು ಕಂಡುಬಂದಲ್ಲಿ ನಿಯಮಾವಳಿಯಂತೆ ಶಾಲಾ ಮುಖ್ಯ ಶಿಕ್ಷಕರು/ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವಿಭಾಗದ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಳುಹಿಸಲಾದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ನೀಡಿದ ಪಠ್ಯ ಪುಸ್ತಕಗಳನ್ನು ಮಾತ್ರ ಅನುಸರಿಸುವಂತೆ ಮತ್ತು ಇತರೆ ಪಠ್ಯ ಪುಸ್ತಕಗಳನ್ನು ಅನುಸರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಎಸೆಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕಲಬುರಗಿ ವಿಭಾಗದಲ್ಲಿ ಕಳೆದ ಸಾಲಿನಿಂದ ಎಸೆಸೆಲ್ಸಿ ಪರೀಕ್ಷೆಗಳ ಅಕ್ರಮಗಳನ್ನು ತಡೆಗಟ್ಟಲು ಸಿ.ಸಿ. ಕ್ಯಾಮರಾ ಅಳವಡಿಕೆ ಹಾಗೂ ವೆಬ್ ಕಾಸ್ಟಿಂಗ್ ಮುಂತಾದ ನವೀನ ಪ್ರಯೋಗಗಳನ್ನು ಜಾರಿಗೆ ತರಲಾಗಿದೆ. ಒಟ್ಟಾರೆಯಾಗಿ ವಿಭಾಗದಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ ಫಲಿತಾಂಶ ಸುಧಾರಣೆ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಚಟುವಟಿಕೆಗಳನ್ನು ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದಿರುವ ಅವರು, ಈ ಆದೇಶವನ್ನು ವಿಭಾಗದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಡಿ.ಡಿ.ಪಿ.ಐ ಅವರಿಗೆ ಸೂಚಿಸಿದ್ದಾರೆ.







