Kalaburagi | ಶಾರ್ಟ್ ಸರ್ಕ್ಯೂಟ್: ಏಳುವರೆ ಎಕರೆ ಕಬ್ಬು ಬೆಂಕಿಗಾಹುತಿ

ಕಲಬುರಗಿ: ಜೆಸ್ಕಾಂನ ನಿರ್ಲಕ್ಷ್ಯದಿಂದ ಟ್ರಾನ್ಸ್‌ಫಾರ್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಕಾಳಗಿ ತಾಲೂಕಿನ ಬೆಣ್ಣೂರ (ಬಿ) ಗ್ರಾಮದಲ್ಲಿ ಮಂಗಳವಾರ ಸುಮಾರು 7.5 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಗ್ರಾಮದ ಜಗದೇವಿ ಈಶ್ವರಪ್ಪ ಬೆನಕನಹಳ್ಳಿ ಹಾಗೂ ಸಿದ್ಧಲಿಂಗ ಬೆನಕನಹಳ್ಳಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಸಂಪೂರ್ಣ ಬೆಳೆ ಸುಟ್ಟುಹೋಗಿದೆ.
ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮವೇ ಈ ಅವಘಡ ಸಂಭವಿಸಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕಾಳಗಿ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಂಕಿಯಿಂದ ಹಾನಿಗೊಳಗಾದ ಜಮೀನು ಹಾಗೂ ನಾಶವಾದ ಬೆಳೆಯ ಮಾಹಿತಿ ಸಂಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಬೆಂಕಿ ಅವಘಡದಲ್ಲಿ ನಷ್ಟ ಅನುಭವಿಸಿದ ರೈತರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೆಸ್ಕಾಂ ಇಲಾಖೆಯೂ ಸಮಗ್ರ ತನಿಖೆ ನಡೆಸಿ ವಿಶೇಷ ಪರಿಹಾರ ಘೋಷಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.






