Kalaburagi | ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ರಾಮಪ್ಪ ಹೊದಲೂರ ಅವಿರೋಧ ಆಯ್ಕೆ

ಕಲಬುರಗಿ: ನಗರದ ಶಹಾಬಜಾರ್‌ನ ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತದ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ರಾಮಪ್ಪ ಎಚ್. ಹೊದಲೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 29ರಂದು ಹೊರಡಿಸಲಾದ ಚುನಾವಣಾ ನೋಟಿಸ್‌ನಂತೆ, ನವೆಂಬರ್ 5ರಂದು ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ರಾಮಪ್ಪ ಎಚ್. ಹೊದಲೂರ ಅವರು ನಾಮಪತ್ರ ಸಲ್ಲಿಸಿದರು. ಇವರ ನಾಮಪತ್ರಕ್ಕೆ ಚನ್ನವೀರಪ್ಪ ವಿ. ಪಾಟೀಲ (ದಣ್ಣೂರ) ಸೂಚಕರಾಗಿ ಹಾಗೂ ಗುರುಲಿಂಗಪ್ಪ ಡಿ. ಹಾದಿಮನಿ ಅನುಮೋದಕರಾಗಿ ಸಹಿ ಹಾಕಿದರು.
ನಾಮಪತ್ರ ಪರಿಶೀಲನೆ ನಡೆಸಿ ಅಂಗೀಕರಿಸಲಾಯಿತು. ಬಳಿಕ ನಾಮಪತ್ರ ಹಿಂಪಡೆಯಲು ನಿಗದಿತ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಯಾರೂ ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ಏಕೈಕ ನಾಮಪತ್ರದ ಅಭ್ಯರ್ಥಿ ಸಿದ್ರಾಮಪ್ಪ ಎಚ್. ಹೊದಲೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ ಎಂ. ಚಿಮ್ಮನಳ್ಳಿ ಘೋಷಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ ಶಿವಶರಣಪ್ಪ ಮುನ್ನಳ್ಳಿ, ಸಿದ್ರಾಮಪ್ಪ ಹಣಮಂತಪ್ಪ ಹೊದಲೂರ, ಚನ್ನವೀರಪ್ಪ ವಿ. ಪಾಟೀಲ (ದಣ್ಣೂರ), ಪ್ರಭುಲಿಂಗ ಬಸವರಾಜ ಗೊಬ್ಬುರ, ಗುರುಲಿಂಗಪ್ಪ ಡಿ. ಹಾದಿಮನಿ, ಶಿವಶರಣಪ್ಪ ಬಸವರಾಜ ಮಲಕೂಡ, ಲಲಿತಾಬಾಯಿ ಸುಭಾಷಚಂದ್ರ ಅಲ್ಲದ, ಶಕುಂತಲಾ ಬಾಬುರಾವ ಸೋಸಟ್ಟಿ, ವೀರೇಶ ಶಾಂತಪ್ಪ ಶೀಲವಂತ, ಶರಣಪ್ಪ ಚಂದ್ರಶೇಖರ ದೇಗಾಂವ, ಶಿವಶಂಕರ ಎಲ್. ಜಾಧವ, ಹಣಮಂತ ಸೈಬಣಾ ಎಕಮೈಕರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.






