Kalaburagi | ಮೇ 31ರಂದು ರಾಜ್ಯ ಒಕ್ಕಲಿಗರ ಸಂಘದ ವಿಶೇಷ ಸರ್ವ ಸದಸ್ಯರ ಸಭೆ: ನಾಗಣ್ಣಗೌಡ ಬಿ.ಪಾಟೀಲ

ಕಲಬುರಗಿ: ರಾಜ್ಯ ಒಕ್ಕಲಿಗರ ಸಂಘ ವತಿಯಿಂದ ಮೇ 31ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಹಾಗೂ ಗಾಯತ್ರಿ ವೃಕ್ಷ ಆವರಣದಲ್ಲಿ ವಿಶೇಷ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕುಡುಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ನಾಗಣ್ಣಗೌಡ ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ಹಾಗೂ ಸುವರ್ಣ ಕರ್ನಾಟಕ ವ್ಯಾಪ್ತಿಯ 14 ರಿಂದ 16 ಜಿಲ್ಲೆಗಳಲ್ಲಿರುವ ಕುಡುಒಕ್ಕಲಿಗ ಸಮುದಾಯದವರು ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವ ಪಡೆದಿರುವ ಎಲ್ಲ ಸದಸ್ಯರು ಸಭೆಗೆ ತಪ್ಪದೇ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ಹೊಸಪೇಟೆ ಸೇರಿದಂತೆ ಸುವರ್ಣ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಚಿಕ್ಕೋಡಿ ಮತ್ತು ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಬೆಂಗಳೂರಿನಲ್ಲಿ ವಾಸಿಸುವ ಕುಡುಒಕ್ಕಲಿಗ ಸಮುದಾಯದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಪ್ರಾಂತಕ್ಕೆ ಸಂಬಂಧಿಸಿದ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.




