Kalaburagi | ಕೇಂದ್ರ ಕಾರಾಗೃಹದಲ್ಲಿ ಬಂದಿಗಳ ಮನಃಪರಿವರ್ತನೆಗೆ ವಿಶೇಷ ಕಾರ್ಯಕ್ರಮ

ಕಲಬುರಗಿ : ಐ.ಎಲ್.ಎಂ.ಇ ಟ್ರಸ್ಟ್ ಪ್ರಿಸನ್ ಮಿನಿಸ್ಟರಿ ಟೀಂ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಕಾರಾಗೃಹದಲ್ಲಿ ಬಂದಿಗಳ ಮನಃಪರಿವರ್ತನೆ, ವ್ಯಸನಮುಕ್ತಿ ಹಾಗೂ ತಿದ್ದುಪಡಿ ಸೇವೆಗಳ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಟ್ರಸ್ಟ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಡ್ಯಾನಿಯಲ್ ಮಂಚಾಲ್, “ಕಾರಾಗೃಹದಲ್ಲಿರುವ ಬಂದಿಗಳ ಮನಃಪರಿವರ್ತನೆ ಮತ್ತು ಉತ್ತಮ ಜೀವನದ ದಾರಿಗೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಬಂದಿಗಳು ಪಡೆದುಕೊಳ್ಳಬೇಕು,” ಎಂದು ಹೇಳಿದರು.
ಈ ವೇಳೆ ತಂಡದ ಸದಸ್ಯ ಮಧನ್ ಮಾತನಾಡಿ, “ಹಿಂದೆ ನಾನು ಕೂಡ ಕಾರಾಗೃಹದಲ್ಲಿ ಬಂದಿಯಾಗಿದ್ದೆ. ಅಲ್ಲಿನ ಮನಃಪರಿವರ್ತನಾ ಕಾರ್ಯಕ್ರಮಗಳು ನನ್ನ ಬದುಕಿಗೆ ಹೊಸ ದಿಕ್ಕು ನೀಡಿದವು. ಇದೀಗ ಉತ್ತಮ ಬದುಕಿನ ಸಂದೇಶವನ್ನು ಇತರ ಬಂದಿಗಳಿಗೆ ಹಂಚಿಕೊಳ್ಳುತ್ತಿರುವುದು ಸಂತೋಷ ತಂದಿದೆ,” ಎಂದು ಹೇಳಿದರು.
ಇನ್ನೊಬ್ಬ ಸದಸ್ಯ ಹ್ಯಾರಿ ರಾಘವಸ್ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ವ್ಯಸನದ ದುಷ್ಪರಿಣಾಮಗಳು, ದುಶ್ಚಟಗಳಿಂದ ಉಂಟಾಗುವ ಸಮಸ್ಯೆಗಳು ಹಾಗೂ ಉತ್ತಮ ಬದುಕಿನತ್ತ ಸಾಗುವ ಮಾರ್ಗಗಳ ಕುರಿತು ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, “ಬಂದಿಗಳ ಪುನರ್ವಸತಿ ಮತ್ತು ಮನಃಪರಿವರ್ತನೆಗಾಗಿ ಕೌಶಲ್ಯಾಧಾರಿತ ತರಬೇತಿಗಳು, ಆರೋಗ್ಯ ತಪಾಸಣೆ, ಸತ್ಸಂಗ ಹಾಗೂ ಆಪ್ತ ಸಮಾಲೋಚನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಬಂದಿಗಳು ಇವುಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಮರಳಬೇಕು,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಡ್ಯಾನಿಯಲ್ ಮಂಚಾಲ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಂದಿಗಳಿಗೆ ಬಾಳೆಹಣ್ಣು ಹಾಗೂ ದೇವರ ನಾಮಗಳ ಪುಸ್ತಕಗಳನ್ನು ವಿತರಿಸಲಾಯಿತು. ಶ್ಯಾಮಿವೆಲ್ ಶದ್ರಕ್ ಬಾಲೇಕರ್ ದೇವರ ನಾಮ ಸ್ಮರಣೆ ನಡೆಸಿದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಶಿಕ್ಷಕರಾದ ನಾಗರಾಜ ಮೂಲಗೆ ವಹಿಸಿಕೊಂಡರೆ, ವಂದನಾರ್ಪಣೆಯನ್ನು ಸಹಾಯಕ ಅಧೀಕ್ಷಕ ಬಿ. ಸುರೇಶ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೈಲರ್‌ಗಳಾದ ಶ್ರೀಮಂತಗೌಡ ಪಾಟೀಲ್, ಪುಂಡಲಿಕ ಟಿ.ಕೆ, ಐ.ಎಲ್.ಎಂ.ಇ ಟ್ರಸ್ಟ್ ಸದಸ್ಯರು ಹಾಗೂ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು.






