ಕಲಬುರಗಿ | ಸ್ಪಾಂಡಿಲೋಆಥ್ರೋಪಥಿ ರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ಅಗತ್ಯ: ಡಾ.ಜಿ.ನರಸಿಂಹಲು

ಕಲಬುರಗಿ : ಸ್ಪಾಂಡಿಲೋಆಥ್ರೋಪಥಿ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ನೀಡಿದರೆ ಅಂಗವೈಕಲ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಹಾಗೂ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಹಿರಿಯ ವೈದ್ಯರು ಹಾಗೂ ಭಾರತೀಯ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಜಿ. ನರಸಿಂಹಲು ತಿಳಿಸಿದರು.
ನಗರದ ಕೆಬಿಎನ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ ಆಯೋಜಿಸಿದ್ದ 5ನೇ ಡಾ. ಎ. ಶಿವಶಂಕರ್ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಂಕೈಲೋಜಿಂಗ್ ಸ್ಪಾಂಡಿಲೈಟಿಸ್, ಸೋರಿಯಾಟಿಕ್ ಅರ್ಥರೈಟಿಸ್, ರಿಯಾಕ್ಟಿವ್ ಅರ್ಥರೈಟಿಸ್ ಮತ್ತು ಎಂಟರೊಪಥಿಕ್ ಅರ್ಥರೈಟಿಸ್ ಸೇರಿದಂತೆ ಹಲವು ಕಾಯಿಲೆಗಳು ಸ್ಪಾಂಡಿಲೋಆಥ್ರೋಪಥಿ ರೋಗಗಳ ಗುಂಪಿನಲ್ಲಿಗೆ ಬರುತ್ತವೆ ಎಂದು ವಿವರಿಸಿದರು.
ಸಾಂಪ್ರದಾಯಿಕ ಚಿಕಿತ್ಸೆಯ ಜೊತೆಗೆ ರೋಗದ ಪ್ರಗತಿಯನ್ನು ನಿಯಂತ್ರಿಸಲು ಜೈವಿಕ ಚಿಕಿತ್ಸೆಗಳು, ಜೀವನಶೈಲಿ ಬದಲಾವಣೆ, ನಿಯಮಿತ ವ್ಯಾಯಾಮ ಮತ್ತು ಭೌತ ಚಿಕಿತ್ಸೆಯೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ. ನರಸಿಂಹಲು ತಿಳಿಸಿದರು.
ಕಲಬುರಗಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಡಾ. ಪಿ. ಎಸ್. ಶಂಕರ್ ಅವರ ವಿದ್ಯಾರ್ಥಿಯೂ ಆಗಿರುವ ಭಾರತೀಯ ವೈದ್ಯರ ಸಂಘ, ಕರ್ನಾಟಕದ ಅಧ್ಯಕ್ಷ ಡಾ.ಬಿ.ಮಹಾಲಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂಗ್ರಾಮ್ ಬಿರಾದಾರ್, ಡಾ.ಶಿವರಾಜ್ ಅಲಶೆಟ್ಟಿ ಮತ್ತು ಅಪಾರ ಸಂಖ್ಯೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ.ಪಿ.ಎಸ್.ಶಂಕರ ತಮ್ಮ ಸಂಕ್ಷಿಪ್ತ ಪರಿಚಯ ಭಾಷಣದಲ್ಲಿ ಡಾ.ನರಸಿಂಹಲು ಅವರ ಬಗ್ಗೆ ಮತ್ತು ಅವರ ವಿದ್ಯಾರ್ಥಿ ದಿನಗಳ ಜೊತೆ ಯಾದಗಿರಿ ಜಿಲ್ಲೆಯ ಗುರುಮಿಠಕ್‌ನಲ್ಲಿ ಅವರ ವೃತ್ತಿ ಅಭ್ಯಾಸವನ್ನು ನೆನಪಿಸಿಕೊಂಡರು.
ಶಂಕರ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ನರೇಂದ್ರ ಬಡಶೇಷಿ ಅತಿಥಿಗಳನ್ನು ಸ್ವಾಗತಿಸಿದರು.







