Kalaburagi | ಎಚ್‌ಐವಿ ಕುರಿತು ತಪ್ಪು ಕಲ್ಪನೆ ನಿವಾರಣೆಗೆ ಕ್ರೀಡಾ ಚಟುವಟಿಕೆ ಪರಿಣಾಮಕಾರಿ: ಡಾ. ಶಂಕ್ರಪ್ಪ ಮೈಲಾರಿ
ಎಚ್‌ಐವಿ ಜಾಗೃತಿಗಾಗಿ 5 ಕಿ.ಮೀ. ಮ್ಯಾರಥಾನ್

ಕಲಬುರಗಿ: ಎಚ್‌ಐವಿ/ಏಡ್ಸ್ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವಲ್ಲಿ ಯುವಜನೋತ್ಸವ ಹಾಗೂ ಮ್ಯಾರಥಾನ್‌ನಂತಹ ಕ್ರೀಡಾ ಚಟುವಟಿಕೆಗಳು ಪರಿಣಾಮಕಾರಿ ವೇದಿಕೆಗಳಾಗಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನರು ಈ ಜಾಗೃತಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಕರೆ ನೀಡಿದರು.
ನಗರದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಯುವಜನೋತ್ಸವ-2026ರ ಅಂಗವಾಗಿ ಮಂಗಳವಾರ 5 ಕಿ.ಮೀ. ಜಿಲ್ಲಾ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿತ್ತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಡಾ. ಶಂಕ್ರಪ್ಪ ಮೈಲಾರಿ, ಆರೋಗ್ಯಕರ ಹಾಗೂ ಎಚ್‌ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಓಟ ಆರಂಭಿಸಿ, ಜಗತ್ ವೃತ್ತ ಹಾಗೂ ಗೋವಾ ಹೋಟೆಲ್ ಮಾರ್ಗವಾಗಿ ಆನಂದ್ ಹೋಟೆಲ್ ತಲುಪಿ, ಅಲ್ಲಿಂದ ಮರಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸುವ ಮೂಲಕ 5 ಕಿ.ಮೀ. ಓಟವನ್ನು ಪೂರ್ಣಗೊಳಿಸಿದರು.
ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಅಜಯ್ ಹಾಗೂ ಮಹಿಳೆಯರ ವಿಭಾಗದಲ್ಲಿ ಅಂಬಿಕಾ ಪ್ರಥಮ ಸ್ಥಾನ ಪಡೆದು ತಲಾ ₹5,000 ನಗದು ಬಹುಮಾನ ಪಡೆದರು. ಸಾಗರ ಹಾಗೂ ಸ್ವಪ್ನ ದ್ವಿತೀಯ ಸ್ಥಾನ ಪಡೆದು ತಲಾ 3,000 ರೂ., ಇಮ್ರಾನ್ ಹಾಗೂ ಸಂಗೀತ ತೃತೀಯ ಸ್ಥಾನ ಪಡೆದು ತಲಾ 2,500 ರೂ. ಬಹುಮಾನ ಪಡೆದರು. ವಿಜೇತರಿಗೆ ಮೆಡಲ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಮಹ್ಮದ್ ಗಫಾರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ. ಅಂಬಾರಾಯ್ ರುದ್ರವಾಡಿ, ವಿಭಾಗೀಯ ಜಂಟಿ ಉಪನಿರ್ದೇಶಕ ಡಾ. ಶರಣಬಸಪ್ಪ ಗಣಜಲಖೇಡ್, ಮಲ್ಲಿಕಾರ್ಜುನ ಜಿ. ಬಿರಾದಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, DAPCU ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಸ್ವಯಂಸೇವಾ ಸಂಸ್ಥೆಗಳ (NGO) ಪ್ರತಿನಿಧಿಗಳು, NSS ಅಧಿಕಾರಿಗಳು, ರೆಡ್ ರಿಬ್ಬನ್ ಕ್ಲಬ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






