ಸೆ.25 ರಿಂದ 27ರವರೆಗೆ ಕಲಬುರಗಿ ಸ್ಪೋರ್ಟ್ಸ್ ಹಬ್ಬ: ನೋಂದಣಿಗೆ ಡಿಸಿ ಸೂಚನೆ

ಕಲಬುರಗಿ: ಇದೇ ಸೆಪ್ಟೆಂಬರ್ 25ರಿಂದ 27ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಕಲಬುರಗಿ ಸ್ಪೋರ್ಟ್ಸ್ ಹಬ್ಬಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಕ್ರೀಡಾಪಟುಗಳು www.kalaburagisportshabba.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಫುಟ್‌ಬಾಲ್, ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳ ಸ್ಪರ್ಧೆಗಳು ನಡೆಯಲಿದ್ದು, ಸೈಕ್ಲಥಾನ್ ಕೂಡ ಆಯೋಜಿಸಲಾಗಿದೆ. ಸ್ಪರ್ಧೆಗಳ ನಿಯಮಗಳು, ಅರ್ಹತಾ ಮಾನದಂಡಗಳು ಹಾಗೂ ಇತರೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪಡೆಯಬಹುದು.
ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ 1,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಶಾಲೆಗಳು, ಕಾಲೇಜುಗಳು, ಕ್ರೀಡಾ ಕ್ಲಬ್‌ಗಳು, ಸಂಘಟನೆಗಳು, ತಂಡಗಳು ಹಾಗೂ ವೈಯಕ್ತಿಕ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಕರ್ನಾಟಕ ಎಲಿವೇಟ್ ಕಾರ್ಯಕ್ರಮದ ವಿಜೇತ ಸಂಸ್ಥೆ, ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳು, ಕ್ರೀಡಾ ಇಲಾಖೆ ಹಾಗೂ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಸಹಯೋಗದಲ್ಲಿ ಈ ಕ್ರೀಡಾ ಹಬ್ಬ ಆಯೋಜಿಸಲಾಗುತ್ತಿದೆ. ಕಲಬುರಗಿಯನ್ನು ಕರ್ನಾಟಕದ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ಬೆಳೆಸುವ ಉದ್ದೇಶದಿಂದ ವಾರ್ಷಿಕ ಕ್ರೀಡಾ ಕ್ಯಾಲೆಂಡರ್‌ಗೆ ಇದು ಅಡಿಪಾಯವಾಗಲಿದೆ ಎಂದು ತಿಳಿಸಿದ್ದಾರೆ.
ಸ್ಪೋರ್ಟ್ಸ್ ಹಬ್ಬದಲ್ಲಿ ನೋಂದಣಿ, ವೇಳಾಪಟ್ಟಿ, ಲೈವ್ ಸ್ಕೋರ್ ಹಾಗೂ ಫಲಿತಾಂಶಗಳು ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗಲಿದ್ದು, ಸೆಪ್ಟೆಂಬರ್ 27ರಂದು ನಡೆಯುವ ವಿವಿಧ ಕ್ರೀಡೆಗಳ ಫೈನಲ್ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.






