ಕಲಬುರಗಿ | ಕ್ರೀಡೆಯು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಡಾ.ಎನ್.ಜಿ.ಕಣ್ಣೂರು

ಕಲಬುರಗಿ: ಇಂದಿನ ದಿನಗಳಲ್ಲಿ ಕ್ರೀಡೆಯು ಮಹಿಳೆಯರ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಎನ್.ಜಿ ಕಣ್ಣೂರ ಹೇಳಿದ್ದಾರೆ.
ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರ ಕಲ್ಬುರ್ಗಿಯಲ್ಲಿ 2025- 26ನೇ ಸಾಲಿನ ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ಆಯ್ಕೆಯ ಪಂದ್ಯಾವಳಿಗಳನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ಕ್ರೀಡೆಯಲ್ಲಿ ಹುಡುಗಿಯರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಆರಂಭಕ್ಕೆ ಪುರುಷರ ಆಟ ಮಾತ್ರವಾಗಿದ್ದ ಕಬಡ್ಡಿ ಆಟದಲ್ಲಿ ಇಂದು ಮಹಿಳೆಯರು ಗಣನೀಯ ಸಾಧನೆ ಮಾಡುತ್ತಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯವು ಮಹಿಳೆಯರ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ಒಟ್ಟಾರೆ ಕ್ರೀಡೆ ಮಹಿಳೆಯರ ಆತ್ಮವಿಶ್ವಾಸ ಮತ್ತು ದೈರ್ಯವನ್ನು ಹೆಚ್ಚಿಸುತ್ತದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾದ ಕೆಪಿಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಚಂದ್ರಶೇಖರ್ ಶೀಲವಂತ ಅವರು ಮಾತನಾಡುತ್ತಾ, ಕ್ರೀಡೆಯಲ್ಲಿ ಮಹಿಳೆಯರು ಸಾಧನೆ ಮಾಡಿದಾಗ, ಅದು ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಗುರುತನ್ನು ತಂದುಕೊಡುತ್ತದೆ. ಕಬಡ್ಡಿ ಕ್ರೀಡೆ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಮಾತನಾಡಿ, ಕಬಡ್ಡಿ ಕ್ರೀಡೆಯು ನ್ಯಾಯೋಚಿತ ಆಟ, ಎದುರಾಳಿಗಳ ಗೌರವ ಮತ್ತು ಕ್ರೀಡಾಸ್ಫೂರ್ತಿಯ ತತ್ವಗಳನ್ನು ಎತ್ತಿಹಿಡಿಯುತ್ತದೆ ಎಂದರು.
ಸ್ಪರ್ಧೆಗಾಗಿ ಕಲಬುರಗಿ ಜಿಲ್ಲೆಯ 10 ಕಾಲೇಜಿನ ಕಬಡ್ಡಿ ಮಹಿಳಾ ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರೆ, ಕಲಬುರಗಿಯ ಸರ್ಕಾರಿ ಸ್ವಾಯತ್ತ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಎರಡನೇ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿನಿಯರಿಗೆ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ್ ಜಾನೆ ಅವರು ಟ್ರೋಫಿ ವಿತರಿಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಸಿದ್ದಪ್ಪ ಎಸ್.ಕಾಂತಾ, ಐಕ್ಯೂಎಸಿಯ ಸಂಯೋಜಕರಾದ ಡಾ.ಸಿದ್ದಾರ್ಥ ಮದನಕರ್, ಪ್ರಾಧ್ಯಾಪಕರುಗಳಾದ ಡಾ.ನಿರ್ಮಲಾ ಸಿರಗಾಪುರ, ಡಾ.ಸುದರ್ಶನ್ ಮದನಕರ, ಡಾ.ಗಾಂಧೀಜಿ ಮೋಳಕೆರೆ, ಡಾ.ದತ್ತುರಾಯ ಪಾಲ್ಗೊಂಡಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಕರಿಬಸಪ್ಪ ಮುಲಗೆ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು, ಡಾ.ವಸಂತ ನಾಶಿ ನಿರೂಪಿಸಿ, ಡಾ.ಹರ್ಷವರ್ಧನ್ ಬಿ ವಂದಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ಆಟಗಾರ್ತಿಯರ ಆಯ್ಕೆಯ ಪಂದ್ಯಾವಳಿಗಳ ಸ್ಪರ್ಧೆಯು ಸೆ.24 ಮತ್ತು 25 ರಂದು ಜರುಗಿತು.







