ಕಲಬುರಗಿ | ಮದ್ಯದ ಬಾಟಲಿ ಇಟ್ಟು ಸಿನಿಮಾ ಹಾಡು ಹಾಡಿದ ಶ್ರೀರಾಮ ಸೇನೆಯ ಮರುಳಾರಾಧ್ಯ ಸ್ವಾಮೀಜಿ; ವಿಡಿಯೋ ವೈರಲ್!

ಕಲಬುರಗಿ: ಪ್ರಮೋದ್ ಮುತಾಲಿಕ್ ಸ್ಥಾಪಿತ ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಮರುಳಾರಾಧ್ಯ ಸ್ವಾಮೀಜಿಯವರು ಸಿನಿಮಾ ಹಾಡು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿದೆ ಎನ್ನಲಾದ ವಿಡಿಯೋದಲ್ಲಿ ಕಾವಿಧಾರಿ ಸ್ವಾಮೀಜಿಯವರು ಕೈಯಲ್ಲಿ ಮೈಕ್ ಹಿಡಿದು “ಯಾರಿವಳು ಯಾರಿವಳು” ಎಂಬ ಜನಪ್ರಿಯ ಸಿನಿಮಾ ಗೀತೆಯನ್ನು ಹಾಡುತ್ತಿರುವುದು ಕಂಡುಬಂದಿದೆ. ಅವರ ಎದುರು ಮದ್ಯದ ಬಾಟಲಿಯಂತೆ ಕಾಣುವ ವಸ್ತುಗಳು ಇರುವುದೂ ವಿಡಿಯೋದಲ್ಲಿ ಗೋಚರಿಸುತ್ತಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಶ್ರಾವಣ ಮಾಸದ ಆರಂಭದಲ್ಲೇ ಸ್ವಾಮೀಜಿಯವರ ಸಿನಿಮಾ ಹಾಡಿನ ವಿಡಿಯೋ ವೈರಲ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ “ಹಿಂದೂ ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ” ಎಂದು ಹೇಳಿಕೆ ನೀಡಿದ್ದರೆನ್ನಲಾದ ಸ್ವಾಮೀಜಿಯವರೇ ಇದೀಗ ಸಿನಿಮಾ ಹಾಡು ಹಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.






