ಕಲಬುರಗಿ ಪಾಲುದಾರರ ಸಮಾವೇಶ-2025 : ಎಂಎಸ್‌ಎಂಇ ಉತ್ತೇಜನಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ : ಸಚಿವ ಶರಣಬಸಪ್ಪ ದರ್ಶನಾಪುರ

ಕಲಬುರಗಿ: ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲು ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಲು ರಾಜ್ಯದಲ್ಲಿ ಎಂಎಸ್ಎಂಇ ಘಟಕಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗುವುದು ಎಂದು ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಕಲಬುರಗಿ ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ವಿಶ್ವ ಮಾನದಂಡಗಳ ದಿನದ ಅಂಗವಾಗಿ ಆಯೋಜಿಸಿದ ಕಲಬುರಗಿ ಪಾಲುದಾರರ ಸಮಾವೇಶ-2025 ಮತ್ತು ಒಂದು ದಿನದ ಝೆಡ್ ಮತ್ತು ಲೀನ್ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶರಣಬಸಪ್ಪ ದರ್ಶನಾಪುರ, ನಿರ್ದೇಶನಾಲಯ ಸ್ಥಾಪನೆ ಕುರಿತು ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.
ಹೊಸ ಕೈಗಾರಿಕೆ ನೀತಿಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತಾ ವಲಯವೆಂದು ಗುರುತಿಸಲಾಗಿದೆ. ಹೀಗಿದ್ದರು ಬೃಹತ್ ಕೈಗಾರಿಕೆ ಬಾರದ ಕಾರಣ ಪ್ರದೇಶದ ಸಚಿವರೆಲ್ಲರು ಈಗಾಗಲೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚುವರಿ ಸಹಾಯಧನ ಮತ್ತು ವಿಶೇಷ ಸವಲತ್ತು ನೀಡಬೇಕೆಂದು ಒತ್ತಾಯ ಮಾಡಲಾಗಿದೆ. ಕೈಗಾರಿಕೆಗಳು ಈ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾಪನೆಯಾದಲ್ಲಿ ಸ್ಥಳೀಯ ಎಂಎಸ್ಎಂಇಗಳಿಗೆ ಅದು ಅನುಕೂಲವಾಗಲಿದೆ ಎಂದರು.
ಎಂಎಸ್ಎಂಇಗಳಿಗಾಗಿಯೆ ಕಲಬುರಗಿಯ ನಂದೂರು ಕೈಗಾರಿಕೆ ಪ್ರದೇಶದಲ್ಲಿ 60 ಎಕರೆ, ಬೀದರದ ನೌಬಾದ ಪ್ರದೇಶದಲ್ಲಿ 30 ಎಕರೆ ಮೀಸಲಿಡಲಾಗಿದೆ. ಇದಲ್ಲದೆ ಕಲಬುರಗಿ ಮತ್ತು ಯಾದಗಿರಿಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಣ್ಣ ಕೈಗಾರಿಕೆ ಇಲಾಖೆ ಮತ್ತು ಕೆಕೆಆರ್ ಡಿಬಿ ಮಂಡಳಿ ತಲಾ 100 ಕೋಟಿ ರೂ.ವ್ಯಯ ಮಾಡುತ್ತಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಮತ್ತು ಹೂಡಿಕೆಗೆ ಗುಣಮಟ್ಟ ದಕ್ಷತೆ ಅತೀ ಅವಶ್ಯಕವಾಗಿದೆ. ಹೀಗಾಗಿ ಎಂಎಸ್ ಎಂಇಗಳು ಉತ್ಕೃಷ್ಟ ಮಟ್ಟದ ಉತ್ಪನ್ನಗಳು ತಯಾರಿಸಬೇಕು. ರಾಜ್ಯದಾದ್ಯಂತ ಸುಮಾರು 22.80 ಲಕ್ಷ ಎಂ.ಎಸ್.ಎಂ.ಇ ಘಟಗಳಿವೆ. ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ರಪ್ತಿನಲ್ಲಿಯೂ ರಾಜ್ಯ ಮುಂದಿದೆ ಎಂದರು.
ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಹುಬ್ಬಳ್ಳಿಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಶಾಖಾ ಕಚೇರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಪಿ.ಎನ್.ಮುರಳಿ ಅವರು ಸಮಾವೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ ಪಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಶಶಿಕಾಂತ್ ಪಾಟೀಲ್, ದಾಲ್ ಮಿಲ್ ಅಸೋಸಿಯೇಷನ್ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕೋಬಾಳ, ಸಣ್ಣ ಕೈಗಾರಿಕೆ ಉದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಭೀಮಾಶಂಖರ ಬಿ.ಪಾಟೀಲ್, ಕಪನೂರ ಕೈಗಾರಿಕೆ ಪ್ರದೇಶದ ತಯಾರಕರ ಸಂಘದ ಅಧ್ಯಕ್ಷ ರವೀಂದ್ರ ಮುಕ್ಕಾ, ಗುಲಬರ್ಗಾ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷ ಮುಹಮ್ಮದ ಖಾನ್, ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ವಿ. ಇಂಗಿನಶೆಟ್ಟಿ, ಇಂಡಸ್ಟ್ರಿ ಮತ್ತು ಎಂಎಸ್ ಎಂಇ ಉಪ ಸಮಿತಿ ಅಧ್ಯಕ್ಷ ಅಭಿಜಿತ್ ಆರ್.ಪಡಶೆಟ್ಟಿ, ಸೇರಿದಂತೆ ಅನೇಕ ಉದ್ದಿಮೆದಾರರು ಭಾಗವಹಿಸಿದ್ದರು. ಡಿಐಸಿ ಕೇಂದ್ರದ ಸಹಾಯಕ ನಿರ್ದೇಶಕರಾದ ಜಾಫರ್ ಖಾಸೀಮ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರೆ ರೂಪಾಲಿ ವಂದಿಸಿದರು.







