ಕಲಬುರಗಿ | ಜ.29 ರಂದು ‘ಕವಿರಾಜಮಾರ್ಗ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ: ಬಿ.ಎಚ್.ನಿರಗುಡಿ

ಕಲಬುರಗಿ : ಕನ್ನಡದ ಮೊಟ್ಟಮೊದಲ ಲಕ್ಷಣ ಗ್ರಂಥವಾಗಿರುವ “ಕವಿರಾಜಮಾರ್ಗ” (ಕ್ರಿ.ಶ. 850) ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಜ.29 ರಂದು ಬೆಳಗ್ಗೆ 10.45 ಗಂಟೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪುಸ್ತಕ ಪ್ರಾಧಿಕಾರ ಸದಸ್ಯ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಲಬುರಗಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಅವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ರಮೇಶ ಲಂಡನಕರ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ವಹಿಸಲಿದ್ದಾರೆ. ಆಶಯ ನುಡಿಯನ್ನು ಕಲಾನಿಕಾಯದ ಡೀನರಾದ ಪ್ರೊ.ಎಚ್. ಟಿ. ಪೋತೆ ಅವರು ನೀಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ವಿರುಪಣ್ಣ ಕಲ್ಲೂರು, ಡಾ.ಸಿದ್ಧರಾಮ ಹೊನಕಲ್ ಹಾಗೂ ಮಹಿಪಾಲರೆಡ್ಡಿ ಮುನ್ನೂರು ಅವರು ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎಚ್. ನಿರಗುಡಿ ಅವರು ಮಾಡಲಿದ್ದಾರೆ.
ವಿಚಾರ ಸಂಕಿರಣದ ಮೊದಲ ಗೋಷ್ಠಿ ಮಧ್ಯಾಹ್ನ 12.30 ರಿಂದ 1.30ರವರೆಗೆ ನಡೆಯಲಿದ್ದು, “ಕವಿರಾಜಮಾರ್ಗದ ವೈಶಿಷ್ಟ್ಯ” ವಿಷಯವನ್ನು ಡಾ.ಭಾಗ್ಯ ಜ್ಯೋತಿ ಹಾಗೂ “ಕವಿರಾಜಮಾರ್ಗದ ಭಾಷೆ” ಕುರಿತು ಡಾ.ನಾಗೇಂದ್ರ ಮಸೂತಿ ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶ್ರೀಶೈಲ ನಾಗರಾಳ ವಹಿಸಲಿದ್ದಾರೆ.
ಎರಡನೇ ಗೋಷ್ಠಿ ಮಧ್ಯಾಹ್ನ 2.30 ರಿಂದ 3.30ರವರೆಗೆ ನಡೆಯಲಿದ್ದು, “ಕವಿರಾಜಮಾರ್ಗದ ಜಾನಪದೀಯ ಅಂಶಗಳು” ಕುರಿತು ಡಾ. ಚಿ. ಸಿ. ನಿಂಗಣ್ಣ ಹಾಗೂ “ಕವಿರಾಜಮಾರ್ಗ – ನಾಡು–ನಾಡವರ್–ಕಾವ್ಯ” ವಿಷಯವನ್ನು ಡಾ. ಚಿದಾನಂದ ಚಿಕ್ಕಮಠ ಅವರು ಪ್ರಸ್ತುತಪಡಿಸಲಿದ್ದಾರೆ. ಈ ಗೋಷ್ಠಿಗೆ ಡಾ.ಸೂರ್ಯಕಾಂತ ಸುಜ್ಯಾತ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಯನ್ನು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅವರು ನೀಡಲಿದ್ದು, ಅಧ್ಯಕ್ಷತೆಯನ್ನು ಮತ್ತೆ ಪ್ರೊ.ಎಚ್.ಟಿ.ಪೋತೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಸಂತೋಷ ಹಾನಗಲ್ಲ, ಡಾ.ರಾಜೇಂದ್ರ ಯರನಾಳೆ ಹಾಗೂ ಸುರೇಶ ಬಡಿಗೇರ ಅವರು ಪಾಲ್ಗೊಳ್ಳಲಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವ ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರಾದ ಬಿ.ಎಚ್.ನಿರಗುಡಿ ಹಾಗೂ ಡಾ. ಸಂತೋಷ ಹಾನಗಲ್ಲ ಅವರು ಮನವಿ ಮಾಡಿದ್ದಾರೆ.







