ಕಲಬುರಗಿ | ಜೂ.26ರಂದು ರಾಜ್ಯ ಮಟ್ಟದ ಯುವಜನ ಆಗ್ರಹ ದಿನ: ಪೋಸ್ಟರ್ ಬಿಡುಗಡೆ

ಕಲಬುರಗಿ: ಎಐಡಿವೈಒ ರಾಜ್ಯ ಸಮಿತಿಯ ನೇತೃತ್ವದಲ್ಲಿ ಖಾಲಿ ಹುದ್ದೆಗಳ ಭರ್ತಿ ಮತ್ತು ಸಾಂಸ್ಕೃತಿಕ ಅಧಿಪತನದ ವಿರುದ್ಧ ಜೂ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಯುವಜನರ ಆಗ್ರಹ ದಿನ ಹಮ್ಮಿಕೊಂಡಿರುವ ನಿಮಿತ್ತ ನಗರದಲ್ಲಿ ಮಂಗಳವಾರ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷ ಗತಿಸಿದರೂ ಸಹ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಹುಮ್ಮಸ್ಸಿನಲ್ಲಿ ಬೇರೆಲ್ಲವನ್ನು ಬದಿಗೆ ಸರಿಸಿದೆ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನರು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್. ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಶಾಲೆಗಳಲ್ಲಿ ಮೂಲ ಸೌಲಭ್ಯಗಳು ಇಲ್ಲದಿರುವುದು, ಆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಅಡಚಣೆಯಾಗಿವೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಖಾಯಂ ನೇಮಕಾತಿಗಳನ್ನು ಮಾಡದೆ ಗುತ್ತಿಗೆ ನೌಕರರನ್ನು ಅವಲಂಬಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ರಾಜ್ಯದ ಆರೋಗ್ಯ ವ್ಯವಸ್ಥೆಯು ಹದಗೆಟ್ಟಿದೆ. ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳ ಸಾವು ಹೆಚ್ಚಳವಾಗಿದೆ. ಸರಕಾರ ಯಾವುದೇ ನೆಪಗಳನ್ನು ಹೇಳದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಐ.ಪಿ.ಎಲ್ ಬೆಟ್ಟಿಂಗ್ ಆಡಿ ತೆಲಂಗಾಣ ರಾಜ್ಯದಲ್ಲಿ 1,023 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಸಹಾಯಕತೆ ವ್ಯಕ್ತಪಡಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಅಶ್ಲೀಲ ವೆಬ್ ಸೈಟ್ ಗಳು, ಆನ್ಲೈನ್ ಗೇಮ್, ಬೆಟ್ಟಿಂಗ್ ಮುಂತಾದವುಗಳನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್ ಎಮ್ ಶರ್ಮಾ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿನಾಥ ಹುಡೆಕಲ, ರಮೇಶ ದೇವಕರ್, ಪ್ರಭಾಕರ ಚಿಂಚೋಳಿ ಒತ್ತಾಯಿಸಿದ್ದಾರೆ.