Kalaburagi | ಪರೀಕ್ಷಾ ಅಕ್ರಮ ಖಂಡಿಸಿ, ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಜು.23ರಂದು ರಾಜ್ಯಾದ್ಯಂತ ಪ್ರತಿಭಟನೆ

ಕಲಬುರಗಿ: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜುಲೈ 23ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಮಾನತೆ, ದುಡಿಯುವ ಹಕ್ಕು ಹಾಗೂ ಮೂಲಭೂತ ಹಕ್ಕುಗಳಿಗಾಗಿ ದೇಶದಲ್ಲಿ ಅಹಿಂಸಾತ್ಮಕ ಹೋರಾಟಗಳು ಮಹತ್ವದ ಬದಲಾವಣೆಗಳನ್ನು ತಂದಿವೆ ಎಂದು ಹೇಳಿದರು.
ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
ದೇಶದ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಹೋರಾಟಗಾರರೊಂದಿಗೆ ಸಂವಾದ ನಡೆಸದಿರುವುದು ಖಂಡನೀಯ ಎಂದು ಆರೋಪಿಸಿದರು.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪತ್ರ ಬರೆದು ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಡಿ.ಜಿ. ಸಾಗರ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಸಿ ವಾಲಿ, ಸುರೇಶ್ ಹಾದಿಮನಿ, ಎಸ್.ಪಿ. ಸುಳ್ಳದ್, ಎಚ್. ಶಂಕರ ಸೇರಿದಂತೆ ಸಮಿತಿ ಮುಖಂಡರು ಉಪಸ್ಥಿತರಿದ್ದರು.






