Kalaburagi | ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಮಲತಂದೆಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಸಾಂದರ್ಭಿಕ ಚಿತ್ರ (PTI)
ಕಲಬುರಗಿ: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿ ಮಲತಂದೆಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.25,000 ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆರೋಪಿಯು, ಬಾಲಕಿಯ ತಾಯಿ ವ್ಯಾಪಾರದ ನಿಮಿತ್ತ ಹೊರಗಡೆ ತೆರಳುತ್ತಿದ್ದ ಸಂದರ್ಭಗಳನ್ನು ದುರುಪಯೋಗಪಡಿಸಿಕೊಂಡು, 13 ವರ್ಷದ ಬಾಲಕಿಯನ್ನು ಬೆದರಿಸಿ ಹಲವು ಬಾರಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
2025ರ ಜೂನ್ 14ರಂದು ರಾತ್ರಿ ಬಾಲಕಿಯ ತಾಯಿ ಎಚ್ಚರಗೊಂಡಾಗ ಮಗಳು ತನ್ನ ಪಕ್ಕದಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ವೇಳೆ, ಮನೆಯ ಮತ್ತೊಂದು ಕೊಠಡಿಯಲ್ಲಿ ಆರೋಪಿತ ಮತ್ತು ಬಾಲಕಿ ಅನುಮಾನಾಸ್ಪದ ಸ್ಥಿತಿಯಲ್ಲಿ ಇರುವುದನ್ನು ಕಂಡು ವಿಚಾರಿಸಿದ್ದಾರೆ. ಆಗ ಬಾಲಕಿ, ತಾಯಿ ಮನೆಯಲ್ಲಿ ಇಲ್ಲದ ಸಂದರ್ಭಗಳಲ್ಲಿ ಹಾಗೂ ರಾತ್ರಿ ವೇಳೆ ಆರೋಪಿತನು ತನ್ನ ಮೇಲೆ ಹಲವು ಬಾರಿ ಬಲವಂತವಾಗಿ ಅತ್ಯಾಚಾರ ಎಸಗಿರುವುದಾಗಿ ಹಾಗೂ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೀವ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾಳೆ.
ಪ್ರಕರಣ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ವೇಳೆ ಬಾಲಕಿಯ ಹೇಳಿಕೆ, ವೈದ್ಯಕೀಯ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿತನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿತು.
ಈ ಹಿನ್ನೆಲೆಯಲ್ಲಿ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ಪೋಕ್ಸೋ ನ್ಯಾಯಾಲಯ–ಎಫ್ಟಿಎಸ್ಸಿ-1) ನ್ಯಾಯಾಧೀಶರಾದ ಎಸ್.ಎಲ್. ಚವ್ಹಾಣ ಅವರು, ಆರೋಪಿ ಹರಿಶ್ಚಂದ್ರ ಚವ್ಹಾಣಗೆ ಪೋಕ್ಸೋ ಕಾಯ್ದೆಯ ಕಲಂ 6ರ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಇದಲ್ಲದೆ, ನೊಂದ ಬಾಲಕಿಗೆ 5 ಲಕ್ಷ ಪರಿಹಾರಧನವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ತೀರ್ಪಿನ ದಿನಾಂಕದಿಂದ ಒಂದು ತಿಂಗಳೊಳಗೆ ಪರಿಹಾರಧನ ವಿತರಿಸುವಂತೆ ಆದೇಶಿಸಿದೆ.
ಪ್ರಕರಣದಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಸಂತೋಷ ಎಲ್. ತಟ್ಟೆಪಳ್ಳಿ ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.






