ಕಲಬುರಗಿ | ದುಮ್ಮದ್ರಿಯಲ್ಲಿ ಮೊಹರಂ ಆಚರಣೆ ವೇಳೆ ಕಲ್ಲು ತೂರಾಟ: ಪೊಲೀಸ್ ಬಿಗಿ ಭದ್ರತೆ

ಯಡ್ರಾಮಿ: ತಾಲೂಕಿನ ದುಮ್ಮದ್ರಿ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ಮತ್ತು ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡಿದ್ದಾರೆ.
ಮೊಹರಂ ಅಂಗವಾಗಿ ಬೆಳಿಗ್ಗೆ ಮೆರವಣಿಗೆ ನಡೆದ ಬಳಿಕ ಧಾರ್ಮಿಕ ಆಚರಣೆಯ ಭಾಗವಾಗಿ ‘ದೇವರ ವಾಣಿ’ ಹೇಳುವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿದೆ.
ದೇವರ ವಾಣಿ ಹೇಳುವ ಸಂದರ್ಭದಲ್ಲಿ ಗ್ರಾಮದ ಗುರಣ್ಣ ಎಂಬವರು “ಇದೆಲ್ಲ ನಾಟಕ ಬಿಡಿ, ಮಳೆ ಯಾವಾಗ ಬರುತ್ತದೆ ಎಂದು ಹೇಳಿ” ಎಂದು ಪ್ರಶ್ನಿಸಿದರೆಂದು ಹೇಳಲಾಗಿದೆ. ಈ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಧಾರ್ಮಿಕ ಆಚರಣೆಯ ವೇಳೆ ಇಂತಹ ಪ್ರಶ್ನೆಗಳು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದರಿಂದ ಮಾತಿನ ಚಕಮಕಿ ಉಂಟಾಗಿ ಉದ್ವಿಗ್ನತೆಗೆ ತಿರುಗಿದೆ. ಬಳಿಕ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ ಶ್ರೀನಿವಾಸಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ತಕ್ಷಣವೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಗುರಣ್ಣ ಎಂಬ ವ್ಯಕ್ತಿಯ ಹೇಳಿಕೆಯಿಂದ ಆರಂಭವಾದ ವಾಗ್ವಾದವೇ ಕಾರಣವಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.




