ಕಲಬುರಗಿ | ವಿವಿಧ ಬೇಡಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಮುಷ್ಕರ

ಕಲಬುರಗಿ : ಅಧಿಕ ಕೆಲಸದೊತ್ತಡದಿಂದ ಮುಕ್ತಿಗೊಳಿಸಲು, ಮೂಲಭೂತ ಸೌಲಭ್ಯ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಂದ ಎರಡನೇ ಹಂತದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಗೊಂಡಿದೆ.
ಶಹಾಬಾದ್ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಎ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತಾಧಿಕಾರಿಗಳ ತಾಲೂಕಾಧ್ಯಕ್ಷ ಹಣಮಂತರಾವ ಪಾಟೀಲ್ ಮಾತನಾಡಿ, ಇ-ಆಫೀಸ್, ಭೂಮಿ. ಆಧಾರ್ ಸೀಡ್, ಲ್ಯಾಂಡ್ಬೀಟ್, ಹಕ್ಕುಪತ್ರ, ನವೋದಯ ಸಹಿತ 21 ಆ್ಯಪ್ಗಳಲ್ಲಿ ಕೆಲಸ ಮಾಡುವ ಒತ್ತಡ ಇದೆ. ಮಾತೃ ಇಲಾಖೆ ಎಲ್ಲ ಕೆಲಸಗಳೊಂದಿಗೆ ಸರಕಾರದ ಆದೇಶದಂತೆ ಇತರೆ ಇಲಾಖೆ ಹಲವು ಕೆಲಸಗಳನ್ನು ನಿರ್ವಹಿಸುತ್ತ ಇದ್ದೇವೆ. 15ರಿಂದ 20 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸರಕಾರ ಮನವಿಗೆ ಇದೂವರೆಗೆ ಸ್ಪಂದಿಸಿಲ್ಲ. ಸುಸಜ್ಜಿತ ಕಚೇರಿ ಇಲ್ಲ, ಕಂಪ್ಯೂಟರ್ ಸೌಕರ್ಯವಿಲ್ಲ. ಇದಲ್ಲ ಸೌಕರ್ಯವನ್ನು ಅಗತ್ಯವಾಗಿ ಮಾಡಿಕೊಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಮಾಡಬೇಕು. ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರ ಮನವಿಗೆ ಸ್ಪಂದಿಸದಿದ್ದರೇ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದರು.
ಶ್ರೀಮಂತ ಹೆಚ್.ಆರ್. ಮಾತನಾಡಿ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸ್ವಂತ ಮೊಬೈಲ್ನಲ್ಲಿ ವೈಯಕ್ತಿಕ ಡೇಟಾ ಬಳಸಿಕೊಂಡು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಎಲ್ಲ ವಿಷಯಗಳ ಪ್ರಗತಿಯನ್ನು ಒಂದೇ ಬಾರಿ ಕೇಳುತ್ತಾರೆ. ಇದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಶರಣು ಕುಂಬಾರ, ಇಮ್ರಾನ್ ಟಿ., ಜಾನ್ ಜಾರ್ಜ, ಶಿಲ್ಪಾ, ಪಾರ್ವತಿ, ಜಯಶ್ರೀ, ರೇವಣಸಿದ್ದಪ್ಪ ಪಾಟೀಲ, ಮಹ್ಮದ್ ಬಿಲಾಲ್, ಶಿವಾನಂದ ಹೂಗಾರ, ಮಹ್ಮದ್ ಆರೀಫ್, ಕೆ.ಜಿ.ಪಾಟೀಲ ಇತರರು ಇದ್ದರು.







