ಕಲಬುರಗಿಯಲ್ಲಿ ಶೇ.100ರಷ್ಟು ಫಲಿತಾಂಶ ಬರುವಂತೆ ಶ್ರಮ ವಹಿಸಿ : ಬಿ.ಫೌಝಿಯಾ ತರನ್ನುಮ್

ಕಲಬುರಗಿ : ಪ್ರಸಕ್ತ 2025-26ನೇ ಸಾಲಿನ ಮುಂಬರುವ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1ರಲ್ಲಿ ಜಿಲ್ಲೆಯಾದ್ಯಂತ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಯು ಶೇ.100ರಷ್ಟು ಫಲಿತಾಂಶ ಪಡೆಯಲು ಉಪನ್ಯಾಸಕರು ಹೆಚ್ಚು ಶ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ–1ರ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೊಂದಿಗೆ ನಡೆದ ಪರೀಕ್ಷೆ ಪೂರ್ವ ಸಭೆಯಲ್ಲಿ ಅವರು ಮಾತನಾಡಿದರು.
ಈ ವರ್ಷ ಜಿಲ್ಲೆಯಲ್ಲಿ 25 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಆದ್ದರಿಂದ ಒಬ್ಬ ವಿದ್ಯಾರ್ಥಿಯೂ ಫೇಲ್ ಆಗದಂತೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ಪರೀಕ್ಷೆಯಲ್ಲಿ ಕಾಪಿ–ಚೀಟಿ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡಬಾರದು. ಪರೀಕ್ಷೆ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು. ಎಲ್ಲಿಯೇ ಅಕ್ರಮ ಕಂಡುಬಂದರೂ ಸಂಬಂಧಪಟ್ಟವರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷೆ ಉತ್ತೀರ್ಣರಾಗುವುದು ಮಾತ್ರ ಸಾಕಾಗುವುದಿಲ್ಲ. ಅವರು ಪಡೆಯುವ ಅಂಕಗಳ ಗುಣಮಟ್ಟವೂ ಸುಧಾರಿಸಬೇಕು. ಕಾಲೇಜಿಗೆ ನಿಯಮಿತವಾಗಿ ಬಾರದ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಮಾತನಾಡಿ ಮಕ್ಕಳನ್ನು ಕಾಲೇಜಿಗೆ ಕಳುಹಿಸುವಂತೆ ಮನವರಿಕೆ ಮಾಡಬೇಕು. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಜಿಲ್ಲೆಯ ಫಲಿತಾಂಶ ಸುಧಾರಣೆಯ ಸಂಪೂರ್ಣ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಳೆದ ವರ್ಷದ ಫಲಿತಾಂಶ ಮರುಕಳಿಸದಂತೆ ಈ ಬಾರಿ ಜಿಲ್ಲೆಯಲ್ಲಿ ಗಣನೀಯ ಫಲಿತಾಂಶ ಸುಧಾರಣೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸೂಚಿಸಿದರು.
ದುರ್ಬಲ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ :
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯಾಗಬೇಕಾದರೆ ಅಧ್ಯಯನದಲ್ಲಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಮೇಲೆ ಉಪನ್ಯಾಸಕರು ವಿಶೇಷ ಗಮನ ಹರಿಸಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪಾಠಗಳ ಪುನರ್‌ಮನನ (ರಿವಿಜನ್) ಮಾಡಿಸಬೇಕು. ಕಾಲೇಜು ಸಮಯದ ಹೊರತಾಗಿ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಹೆಚ್ಚುವರಿ ತರಗತಿಗಳನ್ನು ನಡೆಸಿ, ಪ್ರಶ್ನೆ ಪತ್ರಿಕೆ ಬಿಡಿಸುವುದು ಹಾಗೂ ವಿದ್ಯಾರ್ಥಿಗಳ ಸಂದೇಹಗಳನ್ನು ನಿವಾರಿಸುವಂತೆ ಸಲಹೆ ನೀಡಿದರು.
ಉಪನ್ಯಾಸಕರ ಮಾರ್ಗದರ್ಶನದಲ್ಲಿಯೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಗ್ರೂಪ್ ಸ್ಟಡಿ ವ್ಯವಸ್ಥೆ ರೂಪಿಸಿ, ಪ್ರಶ್ನೆ ಪತ್ರಿಕೆ, ವಿಷಯವಾರು ರಿವಿಜನ್ ಹಾಗೂ ಸಂಭಾವ್ಯ ಪ್ರಶ್ನೆಗಳ ಮೂಲಕ ಅಧ್ಯಯನಕ್ಕೆ ಉತ್ತೇಜನ ನೀಡಬೇಕು ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿರುವುದರಿಂದ, ಪ್ರತಿಯೊಬ್ಬ ಉಪನ್ಯಾಸಕರಿಗೆ ತಲಾ 10 ವಿದ್ಯಾರ್ಥಿಗಳ ಮೇಲ್ವಿಚಾರಣೆಯ ಜವಾಬ್ದಾರಿ ನೀಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸುರೇಶ್ ಅಕ್ಕಣ್ಣ ಸೇರಿದಂತೆ ಜಿಲ್ಲೆಯ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸಿದ್ದರು.







