Kalaburagi | ಗಟ್ಟಿ ಸಾಹಿತ್ಯಕ್ಕೆ ತುಡಿತ ಅಗತ್ಯ : ನರಸಿಂಗರಾವ ಹೇಮನೂರ

ಕಲಬುರಗಿ : ಕಾವ್ಯ ಹುಟ್ಟಬೇಕಾದರೆ ಸಾಹಿತ್ಯದ ಬಗ್ಗೆ ಒಳಗಿನಿಂದ ತುಡಿತ ಇರಬೇಕು. ಆಗ ಮಾತ್ರ ಗಟ್ಟಿ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ ಎಂದು ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರೂ ಆದ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಮೇ 31ರಂದು ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಆಯೋಜಿಸಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪರಿಷತ್ ವತಿಯಿಂದ ನಡೆದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಹೊಸ ಬರಹಗಾರರಲ್ಲಿ ಅಧ್ಯಯನದ ಕೊರತೆ ಕಾಣಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಕಾವ್ಯ ಪರಂಪರೆಗೆ ವಿಶೇಷ ಸ್ಥಾನಮಾನವಿದ್ದು, ಅದರ ಆಳವಾದ ಅಧ್ಯಯನ ನಡೆದಾಗ ಮಾತ್ರ ಕಾವ್ಯದ ಮೂಲಕ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾಹಿತ್ಯ ಕೃಷಿಗೆ ಈ ನೆಲದ ಪರಂಪರೆ ಬಹಳ ಹಿರಿದಾಗಿದೆ. ದೇಶಿ ಸಾಹಿತ್ಯದಲ್ಲಿ ಕಾವ್ಯ ಪ್ರೀತಿಯಿಂದ ತಮ್ಮದೇ ಆದ ಹಿರಿಮೆ ಸಾಧಿಸಿರುವ ಸಾಹಿತಿಗಳಲ್ಲಿ ನರಸಿಂಗರಾವ ಹೇಮನೂರ ಪ್ರಮುಖರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಶೋಧಕ ಮುಡುಬಿ ಗುಂಡೇರಾವ, ಕೇಂದ್ರ ಕಸಾಪ ಪ್ರತಿನಿಧಿ ಸೈಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ, ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ಕುಪೇಂದ್ರ ಬರಗಾಲಿ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಮಹೇಶ ಚಿಂತನಪಳ್ಳಿ, ಲಲಿತಾ ಪಾಟೀಲ, ವಿಶಾಲಾಕ್ಷಿ ಮಾಯಣ್ಣನವರ್, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಕವಿತಾ ಕಾವಳೆ, ವಿನೋದಕುಮಾರ ಜೇನವೇರಿ, ಹಣಮಂತರಾವ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಪ್ರಭುಶೆಟ್ಟಿ ಮುದ್ದಾ, ಮಂಜುನಾಥ ಕಂಬಾಳಿಮಠ, ಮಲ್ಲಿನಾಥ ಸಂಗಶೆಟ್ಟಿ, ಸೋಮಶೇಖರ ಹೊಸಮಠ, ಹೆಚ್ ಎಸ್ ಬರಗಾಲಿ, ಚಂದ್ರಕಾoತ ಸೂರನ್, ಜನಾರ್ಧನ ಹೇಮನೂರ, ದಿನೇಶ ಮದಕರಿ, ನಾಗಪ್ಪ ಸಜ್ಜನ್, ಶರಣು ಹಾಗರಗುಂಡಗಿ, ಮಹಾಲಿಂಗಯ್ಯ ಸ್ವಾಮಿ, ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






