ಕಲಬುರಗಿ | ಹೊಸ ವರ್ಷದ ಗಿಫ್ಟ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ಉಪನ್ಯಾಸಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ರಾಜಕುಮಾರ ಕುಂಬಾರ
ಕಲಬುರಗಿ (ಅಫಜಲಪುರ): ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವುದನ್ನು ಬಿಟ್ಟು, ಹೊಸ ವರ್ಷದ ಗಿಫ್ಟ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪದವಿಪೂರ್ವ ಕಾಲೇಜೊಂದರ ಅರ್ಥಶಾಸ್ತ್ರ ಉಪನ್ಯಾಸಕ ರಾಜಕುಮಾರ ಕುಂಬಾರ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.1ರಂದು ಹೊಸ ವರ್ಷದ ಹಿನ್ನೆಲೆಯಲ್ಲಿ ನಿನಗೆ ಗಿಫ್ಟ್ ಕೊಡುತ್ತೇನೆ, ಬೇಗ ಕಾಲೇಜಿಗೆ ಬಾ ಎಂದು ವಿದ್ಯಾರ್ಥಿನಿಗೆ ಕರೆ ಮಾಡಿ ಪುಸಲಾಯಿಸಿ, ನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ದಾಖಲಾಗಿದೆ.
ಪ್ರಕರಣವನ್ನು ಮುಚ್ಚಿಹಾಕಲು ಯತ್ನ ನಡೆದಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ್ ಅಕ್ಕಣ್ಣ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಿಡಿಪಿಓ ಪ್ರವೀಣ್ ಹೇರೂರ, ಪಿಎಸ್ಐ ಸೋಮಲಿಂಗ ಒಡೆಯರ್ ಸೇರಿದಂತೆ ಅಧಿಕಾರಿಗಳ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ರಜೆ ಹಾಕಿ ಉಪನ್ಯಾಸಕ ನಾಪತ್ತೆ!
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಆರೋಪಿ ಉಪನ್ಯಾಸಕ ರಾಜಕುಮಾರ ಕುಂಬಾರ ಕಾಲೇಜಿನ ವೆಬ್ಸೈಟ್ ಮೂಲಕ ರಜೆ ಸಲ್ಲಿಸಿ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ನಡುವೆ ಭೀಮ ಆರ್ಮಿ ಸಂಘಟನೆ ಕಾರ್ಯಕರ್ತರು ಆರೋಪಿ ಉಪನ್ಯಾಸಕನನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ಘಟನೆಯ ಕುರಿತು ಕಾಲೇಜಿನ ಪ್ರಾಂಶುಪಾಲರೊಂದಿಗೆ ಚರ್ಚೆ ನಡೆಸಲಾಗಿದೆ. ಸಿಡಿಪಿಓ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. ಪ್ರಕರಣದ ಆಧಾರದ ಮೇಲೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಸಂಬಂಧಿಸಿದ ಆರೋಪಿತ ಉಪನ್ಯಾಸಕನ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು.
-ಸುರೇಶ್ ಅಕ್ಕಣ್ಣ, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ







