ಕಲಬುರಗಿ | ಕೇಂದ್ರೀಯ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ: ನೇಣು ಬಿಗಿದುಕೊಂಡು ವಿದ್ಯಾರ್ಥಿನಿಯೋರ್ವಳು ತನ್ನ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ತಾಲೂಕಿನ ಕಡಗಂಚಿ ಸಮೀಪದಲ್ಲಿರುವ ಕೇಂದ್ರೀಯ ವಿವಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕ್ಯಾಂಪಸ್ ನಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ 5ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ಒಡಿಶಾ ಮೂಲದ ಜಯಶ್ರೀ ನಾಯಕ(21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ವಿಧ್ಯಾರ್ಥಿನಿ ಯುಮುನಾ ಹಾಸ್ಟೆಲ್ ನಲ್ಲಿನ ರೂಮ್ ನಂಬರ್ A1 ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಡೀನ್ ಸ್ಟೂಡೆಂಟ್ ವೆಲಫೇರ್ ಬಸವರಾಜ ಕುಬಕಡ್ಡಿ ಅವರ ಜೊತೆ ಮಾತನಾಡಿದ ಬಳಿಕ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದಳು. ಬುಧವಾರ ಕ್ಲಾಸಿಗೆ ಬರಲಿಲ್ಲ, ಮಧ್ಯಾಹ್ನ ಊಟಕ್ಕೆ ಬಂದಾಗ ರೂಮ್‌ಗೆ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಕಾರ್ಪೆಂಟರ್ ಅವರನ್ನು ಕರೆಯಿಸಿ ಹಾಸ್ಟೆಲ್ ರೂಮಿನ ಬಾಗಿಲು ಮುರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ನರೋಣಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







