Kalaburagi | ವಿದ್ಯಾರ್ಥಿಗಳು ಏಕಾಗ್ರತೆ, ಪರಿಶ್ರಮದಿಂದ ಸಾಧನೆ ಮಾಡಬೇಕು: ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ

ಕಲಬುರಗಿ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯದ ನಿರ್ಮಾಪಕರು. ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಸತತ ಪ್ರಯತ್ನ ಮತ್ತು ಏಕಾಗ್ರತೆಯಿಂದ ಕಾರ್ಯನಿರ್ವಹಿಸಿದರೆ ಭವಿಷ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ಖ್ಯಾತ ಮಕ್ಕಳ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ನಗರದ ಎಕೆಆರ್ ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶಿಕ್ಷಣವು ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಂಶೋಧಕ ಹಾಗೂ ಸಾಹಿತಿ ಮುಡುಬಿ ಗುಂಡೇರಾವ ಸಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವ ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಜೊತೆಗೆ ಪೋಷಕರ ಮೇಲೂ ಇದೆ ಎಂದು ಹೇಳಿದರು. ಮಕ್ಕಳು ಟಿವಿ ಮತ್ತು ಮೊಬೈಲ್ ಬಳಕೆಯಿಂದ ದೂರವಿದ್ದು, ಓದು ಹಾಗೂ ವ್ಯಕ್ತಿತ್ವ ವಿಕಸನದತ್ತ ಹೆಚ್ಚಿನ ಗಮನ ಹರಿಸುವಂತೆ ಪೋಷಕರು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಚನಪ್ರಿಯ ಜಗದೀಶ ಮರಪಳ್ಳಿ, ಕಾಲೇಜಿನ ವ್ಯವಸ್ಥಾಪಕ ಎಂ.ವಿ.ಎಸ್. ಸುಬ್ರಹ್ಮಣ್ಯಂ, ಕಿರಣ ಗೋಡಬಾಲೆ, ಶಿವರಾಜ ಪಾಟೀಲ, ಪರಮಾನಂದ ಸರಸಂಬಿ, ರಾಜೇಂದ್ರ ಮಾಡಬೂಳ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಬಸವರಾಜ ಮೊರಬದ, ಪ್ರೊ. ಎಸ್.ಎಲ್. ಪಾಟೀಲ, ಧರ್ಮರಾಜ ಜವಳಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.






