Kalaburagi | ವಿದ್ಯಾರ್ಥಿಗಳು ನಾವೀನ್ಯತೆಗೆ ಆದ್ಯತೆ ನೀಡಬೇಕು : ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ಆಲೋಚನೆಗಳನ್ನು ಅರ್ಥಪೂರ್ಣ ಹಾಗೂ ಸಾಮಾಜಿಕವಾಗಿ ಪ್ರಸ್ತುತವಾಗಿರುವ ಪರಿಹಾರಗಳಾಗಿ ರೂಪಿಸುವ ನಿಟ್ಟಿನಲ್ಲಿ ನಾವೀನ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಗಳ ನಿಕಾಯ ಹಾಗೂ ಸಂಸ್ಥೆಯ ನಾವೀನ್ಯತಾ ಮಂಡಳಿ ವತಿಯಿಂದ ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ನಾವೀನ್ಯತೆ ಹಾಗೂ ಮಾನವ-ಎಐ ಸಂಬಂಧ ಕುರಿತು ಸೆ. 29 ಮತ್ತು 30ರಂದು ಆಯೋಜಿಸಿದ್ದ ಎರಡು ದಿನಗಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಂಪ್ಯೂಟರ್ ಮತ್ತು ಸಿಸ್ಟಮ್ಸ್ ಸೈನ್ಸಸ್ ನಿಕಾಯದ ಪ್ರೊ. ಟಿ.ವಿ. ವಿಜಯ್ ಕುಮಾರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಅವರು ‘ದತ್ತಾಂಶದಿಂದ ಜ್ಞಾನದವರೆಗೆ: ಎಐ ಮತ್ತು ಡೇಟಾ ವಿಜ್ಞಾನದ ಶಕ್ತಿ’ ಹಾಗೂ ‘ಪ್ರಕೃತಿಯಿಂದ ಪ್ರೇರಿತ ಕಂಪ್ಯೂಟಿಂಗ್’ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಭವಿಷ್ಯದ ಸಾಧ್ಯತೆಗಳ ಕುರಿತು ವಿವರಿಸಿದರು.
ಸಂವಾದದಲ್ಲಿ ಪ್ರೊ. ಟಿ.ವಿ. ವಿಜಯ್ ಕುಮಾರ್, ಪ್ರೊ. ಅಮರೇಂದ್ರ ಮತ್ಸಾ, ಪ್ರೊ. ವಿಜಯೇಂದ್ರ ಪಾಂಡೆ, ಡಾ. ರೋಹಿತ್ ಕುಮಾರ್ ಬಿ., ಡಾ. ಆಸ್ಥಾ, ಪ್ರೊ. ಪವಿತ್ರಾ ಆಲೂರು ಹಾಗೂ ಡಾ. ನಾಗರಾಜ್ ವಿ. ಧಾರವಾಡಕರ್ ಭಾಗವಹಿಸಿದ್ದರು. ಪ್ಯಾನಲ್ ಸದಸ್ಯರು ಮಾನವ ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಸಂಬಂಧದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಳಿಕ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಹಾಗೂ ಅಧ್ಯಾಪಕರೊಂದಿಗೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಿಯುಕೆಯ ಕಂಪ್ಯೂಟರ್ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಆರ್.ಎಸ್. ಹೆಗಡಿ, ಐಕ್ಯೂಎಸಿ ನಿರ್ದೇಶಕ ಹಾಗೂ ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ. ಅಮರೇಂದ್ರ ಮತ್ಸಾ, ಭೌತ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ರಾಜೀವ್ ಶೇಷ ಜೋಶಿ, ಸಾಮಾಜಿಕ ಮತ್ತು ವರ್ತನಾ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಪವಿತ್ರಾ ಆಲೂರು ಹಾಗೂ ಸಿಯುಕೆ ಸಂಸ್ಥೆಯ ನಾವೀನ್ಯತಾ ಮಂಡಳಿಯ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಬಿ. ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






