ಕಲಬುರಗಿ | ದೇಶದ ಆರ್ಥಿಕತೆಗೆ ವಿದ್ಯಾರ್ಥಿಗಳ ಪಾಲುದಾರಿಕೆ ಅಗತ್ಯ: ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಸಂಪತ್ತು ಸೃಷ್ಟಿಗೆ ಹೂಡಿಕೆ ಮಾರ್ಗಗಳ ಅರಿವು ಅತ್ಯಂತ ಮುಖ್ಯ, ದೇಶದ ಆರ್ಥಿಕತೆಗೆ ವಿದ್ಯಾರ್ಥಿಗಳ ಪಾಲುದಾರಿಕೆ ಅಗತ್ಯ ಎಂದು ಕೇಂದ್ರೀಯ ವಿವಿಯ ಕುಲಪತಿ ಪ್ರೊ.ಬಟ್ಟು ಸತ್ಯ ನಾರಾಯಣ ಅವರು ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಸಿಯುಕೆಯಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಆಯೋಜಿಸಿದ್ದ 'ಬುದ್ಧಿವಂತಿಕೆಯಿಂದ ಸಂಪತ್ತನ್ನು ಯುವ ಹೂಡಿಕೆದಾರರಿಗೆ ಚತುರ ನಡೆ' ಎಂಬ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೂಡಿಕೆ ಎಂದರೆ ಕೇವಲ ಷೇರು ಮಾರುಕಟ್ಟೆ ಮಾತ್ರವಲ್ಲ, ಚಿನ್ನ, ಭೂಮಿ, ಮನೆ, ಮ್ಯೂಚುವಲ್ ಫಂಡ್‌ಗಳು ಹಾಗೂ ಇತರ ಆಸ್ತಿಗಳಲ್ಲಿಯೂ ಹೂಡಿಕೆ ಸಾಧ್ಯವೆಂದು ಅವರು ತಿಳಿಸಿದರು.
“ವಿದ್ಯಾರ್ಥಿ ಜೀವನದಲ್ಲಿ ಹಣ ಹೂಡಲು ಸರಿಯಾದ ಸಮಯವಲ್ಲ, ಆದರೆ ಹೂಡಿಕೆ ಮಾರ್ಗಗಳನ್ನು ಅರಿತುಕೊಳ್ಳಲು ಇದು ಸೂಕ್ತ ಕಾಲ. ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ಹೂಡಿಕೆ ಭವಿಷ್ಯದಲ್ಲಿ ದೊಡ್ಡ ಸಂಪತ್ತಾಗಿ ರೂಪಾಂತರಗೊಳ್ಳುತ್ತದೆ” ಎಂದು ಕುಲಪತಿ ಹೇಳಿದರು.
ಸಂಪನ್ಮೂಲ ವ್ಯಕ್ತಿ ಪುಣೆಯ ಎಂಐಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿಯ ಡಾ.ಕುನಾಲ್ ಗೌರವ್ ಮಾತನಾಡಿ, “ಆರ್ಥಿಕ ಸ್ವಾವಲಂಬನೆಗೆ ಮೂರು ಪಾಠಗಳು ಮುಖ್ಯ – ಜ್ಞಾನ-ಕೌಶಲ್ಯ-ವೈಯಕ್ತಿಕತೆಗೆ ಹೂಡಿಕೆ, ಭವಿಷ್ಯಕ್ಕಾಗಿ ಉಳಿತಾಯ ಮತ್ತು ಬರಿ ಉಳಿವಲ್ಲ, ಬುದ್ಧಿವಂತ ಹೂಡಿಕೆ. ಆದಾಯ ಬಂದ ತಕ್ಷಣ ಹೂಡಿಕೆ ಪ್ರಾರಂಭಿಸಿ” ಎಂದು ಸಲಹೆ ನೀಡಿದರು.
ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‌ನ ಡೀನ್ ಪ್ರೊ.ಪಾಂಡುರoಗ ಪತ್ತಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, “ಪಾಕೆಟ್ ಮನಿಯ ಅರ್ಧಭಾಗವನ್ನಾದರೂ ಆಸ್ತಿಗಳಲ್ಲಿ ಹೂಡಿಕೆ ಮಾಡಿ” ಎಂದರು.
ಕಾರ್ಯಕ್ರಮದಲ್ಲಿ ಡಾ.ಮುಹಮ್ಮದ್ ಜೋಹೈರ್ ಸ್ವಾಗತಿಸಿದರು. ಡಾ.ಮಹೇಂದರ್ ವಂದಿಸಿದರು. ಸೈಯದ್ ಸಾಹಿಲ್ ಇಕ್ಬಾಲ್ ಮತ್ತು ಪರೋಮಿತ್ ರಾಯ್ ನಿರೂಪಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ಗೀತೆಯನ್ನು ಹಾಡಿದರು.
ಆಯೋಜಕ ಸಮಿತಿಯ ಡಾ.ಸೈಲಾಜ್ ಕೊನೆಕ್, ಡಾ.ಸುಮಾ ಸ್ಕಾರಿಯಾ, ಪ್ರೊ.ವಿಜಯಕುಮಾರ್, ಪ್ರೊ.ದೇವರಾಜಪ್ಪ, ಪ್ರೊ.ಪದ್ಮಶ್ರೀ, ಡಾ.ಗೌತಮ್, ಡಾ.ಸುಷ್ಮಾ, ಡಾ.ಸಫಿಯಾ ಪರ್ವೀನ್, ಡಾ.ರಂಗನಾಥನ್, ಡಾ.ನಟರಾಜ್, ಡಾ.ನವೀನ್, ಡಾ. ಜಗದೀಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.







