Kalaburagi | ಪ್ರತಿಭೆ, ಪರಿಶ್ರಮ ಮತ್ತು ಶಿಸ್ತಿಗೆ ಯಶಸ್ಸು ಖಚಿತ : ಅಡವೇಶ ಇಟಗಿ

ಕಲಬುರಗಿ: ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಬೇಕು. ಪ್ರತಿಭೆ, ಪರಿಶ್ರಮ ಮತ್ತು ಶಿಸ್ತು ಇದ್ದರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡವೇಶ ಇಟಗಿ ಹೇಳಿದರು.
ನಗರದ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 12 ರಿಂದ 18 ವರ್ಷದ ಮಕ್ಕಳ ನಾಲ್ಕು ದಿನಗಳ ವಿಭಾಗೀಯ ‘ಬಾಲ ಬಾಂಧವ್ಯ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡದಲ್ಲಿ ನಡೆಯುತ್ತಿದ್ದ ಈ ಕಾರ್ಯಾಗಾರವನ್ನು ಮೊದಲ ಬಾರಿಗೆ ಕಲಬುರಗಿಯಲ್ಲಿ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಮಕ್ಕಳ ಸಹಾಯವಾಣಿ, ಅಕ್ಕಪಡೆ, ಬಾಲ್ಯ ವಿವಾಹ ತಡೆ ಹಾಗೂ ಶಿಕ್ಷಣದ ಮಹತ್ವದ ಕುರಿತು ಮಕ್ಕಳು ಜಾಗೃತರಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಯೋಜನಾಧಿಕಾರಿ ವಿರೂಪಾಕ್ಷಗೌಡ ಪಿ. ಪಾಟೀಲ ಮಾತನಾಡಿ, ಕಥೆಗಳ ಮೂಲಕ ಮಕ್ಕಳಲ್ಲಿ ಏಕಾಗ್ರತೆ, ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸಬಹುದು. ಪಂಚೇಂದ್ರಿಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟದ ಬಾಲ ವಿಕಾಸ ಅಕಾಡೆಮಿ ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯ ಎ.ಕೆ. ರಾಮೇಶ್ವರ ಮಾತನಾಡಿ, ಮಕ್ಕಳಿಗಿಂತ ಅಮೂಲ್ಯವಾದ ಸಂಪತ್ತು ಮತ್ತೊಂದಿಲ್ಲ. ಭಾರತದ ಭವಿಷ್ಯ ಮಕ್ಕಳ ಕನಸು, ಪ್ರತಿಭೆ ಮತ್ತು ಅವರ ಕಣ್ಣಿನ ಹೊಳಪಿನಲ್ಲಿದೆ ಎಂದು ಹೇಳಿದರು.
ನಾಮನಿರ್ದೇಶಿತ ಸದಸ್ಯ ರಣಧೀರ್ ಹೊಸಮನಿ ಮಾತನಾಡಿ, ಮಕ್ಕಳಲ್ಲಿ ಬಾಂಧವ್ಯ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳ ಸುಮಾರು 100 ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಿವಶರಣಪ್ಪ ಸ್ವಾಗತಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ. ಪಾಟೀಲ್ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಇಜೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.






