Kalaburagi | ‘ಸ್ವಾತಂತ್ರ್ಯದ ಓಟ’ ನಾಟಕ ಯಶಸ್ವಿ ಪ್ರದರ್ಶನ: ಮಾನವೀಯ ಮೌಲ್ಯಗಳ ಸಾರ ಅನಾವರಣ

ಕಲಬುರಗಿ: ದೇಶ ವಿಭಜನೆಯ ನೋವು, ಮಾನವೀಯ ಸಂಬಂಧಗಳ ಮಹತ್ವ ಹಾಗೂ ಸಾಮರಸ್ಯದ ಸಂದೇಶವನ್ನು ಸಾರುವ ‘ಸ್ವಾತಂತ್ರ್ಯದ ಓಟ’ ನಾಟಕವು ಶನಿವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಲಬುರಗಿ ರಂಗಾಯಣದ ಆಯೋಜನೆಯಲ್ಲಿ ನಡೆದ ಪ್ರದರ್ಶನಕ್ಕೆ ಸೈಯದ್ ಶಾ ಇಬ್ರಾಹಿಂ ಹುಸೇನಿ, ಜಾನ್ಸಿನ್ ಸಜ್ಜಾ ದ್ರೋಜಾ ಕುರ್ತ್, ಇಲಿಯಾಸ್ ನಿಜಾಮ್ ಬಾಬಾ, ರಂಗಾಯಣ ನಿರ್ದೇಶಕಿ ಸುಜಾತ ಜಂಗಮ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಸಿದ್ದರಾಮ ಚಾಲನೆ ನೀಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೋಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಲಾದ ಈ ನಾಟಕಕ್ಕೆ ನಟರಾಜ್ ಹೊನ್ನವಳ್ಳಿ ನಿರ್ದೇಶನ ನೀಡಿದ್ದು, ರಾಘವ ಕಮ್ಮಾರ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಮೊಗ್ಗ ರಂಗಾಯಣದ ಕಲಾವಿದರ ತಂಡ ಪರಿಣಾಮಕಾರಿ ಅಭಿನಯದ ಮೂಲಕ ಕಥೆಯನ್ನು ಜೀವಂತಗೊಳಿಸಿತು.
ಪಾಕಿಸ್ತಾನದಿಂದ ಭಾರತಕ್ಕೆ ಬಂದ 18 ವರ್ಷದ ಚಾಂದ್ ಅಲಿ ಎಂಬ ಯುವಕನ ಬದುಕಿನ ಹೋರಾಟವನ್ನು ಆಧರಿಸಿದ ಕಥಾನಕವು, ದೇಶ ವಿಭಜನೆಯಿಂದ ಸಾಮಾನ್ಯ ಜನರು ಅನುಭವಿಸಿದ ನೋವು, ಅಸುರಕ್ಷತೆ ಮತ್ತು ಗುರುತಿನ ಸಂಕಷ್ಟವನ್ನು ಮನಮುಟ್ಟುವ ರೀತಿಯಲ್ಲಿ ಅನಾವರಣಗೊಳಿಸಿತು.
ಜಾತಿ, ಧರ್ಮ, ಭಾಷೆ ಹಾಗೂ ಗಡಿಗಳ ಭೇದವನ್ನು ಮೀರಿ ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶವನ್ನು ನಾಟಕ ಬಲವಾಗಿ ಪ್ರತಿಪಾದಿಸಿತು. ಪ್ರೀತಿ, ವಾತ್ಸಲ್ಯ, ಕರುಣೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಕಥಾವಸ್ತುವಿನ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಲಾಯಿತು.
ವಾಘಾ ಗಡಿಯಿಂದ ಆರಂಭವಾಗುವ ಕಥೆ ಕರಾಚಿ, ಲಾಹೋರ್, ದೆಹಲಿ, ಮುತ್ತುಪಾಡಿ, ಕ್ಯಾಲಿಫೋರ್ನಿಯಾ ಹಾಗೂ ಬರ್ಲಿನ್‌ವರೆಗೆ ಸಾಗುತ್ತಾ, ದೇಶ ವಿಭಜನೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದವರೆಗಿನ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತೆರೆದಿಟ್ಟಿತು.
ನಾಟಕದ ಕಲಾವಿದರ ಅಭಿನಯ, ಸಂಗೀತ, ರಂಗಸಜ್ಜಿಕೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತ್ಯಾಸಕ್ತರು, ರಂಗಕರ್ಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರದರ್ಶನ ವೀಕ್ಷಿಸಿದರು.






