ಕಲಬುರಗಿ| ಹಾಲಿನ ದರ ಏರಿಕೆ, ಬಸ್ ದರ ಹೆಚ್ಚಳದ ಪ್ರಸ್ತಾವನೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಶಹಾಬಾದ್: ಹಾಲಿನ ದರ ಏರಿಕೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯನ್ನು ಖಂಡಿಸಿ ಎಸ್‌ಯುಸಿಐ (ಸಿ) ಪಕ್ಷದ ಸ್ಥಳೀಯ ಸಮಿತಿ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಸ್ಥಳೀಯ ಕಾರ್ಯದರ್ಶಿ ಗಣಪತರಾವ್ ಕೆ. ಮಾನೆ, ಬರಗಾಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8ರೂ. ಹೆಚ್ಚಿಸಿರುವುದು ಖಂಡನೀಯ. ಹೈನುಗಾರರ ಸಮಸ್ಯೆ ಪರಿಹರಿಸಲು ಬೆಲೆ ಏರಿಕೆಯ ಬದಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯನ್ನೂ ತೀವ್ರವಾಗಿ ವಿರೋಧಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾದ ರಾಘವೇಂದ್ರ, ಎಂ.ಜಿ. ಜಗನ್ನಾಥ, ಎಸ್.ಎಚ್. ರಮೇಶ್ ದೇವಕರ್ ಸೇರಿದಂತೆ ಮಹಾದೇವಿ ಮಾನೆ, ರಘು ಪವಾರ್, ಸಿದ್ದು ಚೌದ್ರಿ, ಆನಂದ್ ತಂಡಗುಲ್ಕರ್, ದೇವರಾಜ್ ಹನುಗುಂಟ, ರಾಜೇಂದ್ರ ಅಥನೂರು, ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ಭಾಗಣ್ಣ ಬುಕ್ಕ, ತುಜಾರಾಮ್ ಎನ್.ಕೆ., ಸ್ಪೂರ್ತಿ ಆರ್.ಜಿ. ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




