Kalaburagi | ಹಾಲಿನ ದರ, ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಎಸ್‌ಯುಸಿಐ (ಸಿ) ಪ್ರತಿಭಟನೆ

ಕಲಬುರಗಿ: ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ 8 ರೂ. ನಿಂದ 12 ರೂ. ರವರೆಗೆ ಹೆಚ್ಚಿಸಿರುವುದನ್ನು ಹಾಗೂ ಬಸ್ ಪ್ರಯಾಣ ದರ ಏರಿಕೆಯ ಪ್ರಸ್ತಾವನೆಯನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಸೋಮವಾರ ನಗರದ ಎಸ್.ವಿ.ಪಿ. ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬರಗಾಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಹಾಲಿನ ದರ ಹೆಚ್ಚಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆಗಳನ್ನು ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಹಿರಿಯ ಸದಸ್ಯೆ ಕಾ.ವಿ.ನಾಗಮ್ಮಾಳ್ ಮಾತನಾಡಿ, ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಹಾಲು ಒಕ್ಕೂಟದ ರಾಜಕೀಯ ಹಿನ್ನೆಲೆಯ ಪದಾಧಿಕಾರಿಗಳು ಗ್ರಾಮೀಣ ಹೈನುಗಾರರಿಗೆ ಬೆಂಬಲ ನೀಡುವ ಹೆಸರಿನಲ್ಲಿ ಇಂತಹ ಒತ್ತಾಯ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರ ಹಾಲು ಉತ್ಪಾದಕರು ಮತ್ತು ಗ್ರಾಹಕರು ಇಬ್ಬರ ಹಿತವನ್ನೂ ಪರಿಗಣಿಸಬೇಕು. ಮೇವು, ಪಶು ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಕೆಎಂಎಫ್‌ನಲ್ಲಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಬದಲು ದರ ಹೆಚ್ಚಳವನ್ನೇ ಪರಿಹಾರವೆಂದು ಭಾವಿಸಿದರೆ ಜನರು ಹಣದುಬ್ಬರದ ವಿಷಚಕ್ರಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದ ಅವರು, ಹಾಲು ಮಕ್ಕಳೂ ಸೇರಿದಂತೆ ಎಲ್ಲರಿಗೂ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಹಾಲಿನ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದುಂದುವೆಚ್ಚ ಕಡಿತಗೊಳಿಸಬೇಕು ಮತ್ತು ದೊಡ್ಡ ಬಂಡವಾಳಗಾರರ ಸಾಲ ಮನ್ನಾ ಮಾಡುವುದನ್ನು ನಿಲ್ಲಿಸಬೇಕು ಎಂದೂ ಆಗ್ರಹಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕಾ. ಜಗನ್ನಾಥ ಎಸ್.ಎಚ್. ಮಾತನಾಡಿ, ನವೆಂಬರ್ 4ರಂದು ಬಸ್ ಪ್ರಯಾಣ ದರವನ್ನು ಶೇ. 40ರಷ್ಟು ಹೆಚ್ಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದು ಅತ್ಯಂತ ಜನವಿರೋಧಿ ನಿಲುವಾಗಿದೆ. ಜನಸಾಮಾನ್ಯರು ಈಗಾಗಲೇ ಅಗತ್ಯ ವಸ್ತುಗಳು ಹಾಗೂ ಆಹಾರಧಾನ್ಯಗಳ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬಸ್ ಪ್ರಯಾಣ ದರವನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು ಮತ್ತು ಹಾಲಿನ ದರ ಏರಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕಾ. ಹಣಮಂತ ಎಸ್.ಎಚ್. ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ನಾಯಕರಾದ ಎಸ್.ಎಂ. ಶರ್ಮಾ, ಡಾ. ಸೀಮಾ, ಮಹೇಶ್ ಎಸ್.ಬಿ., ಸಂದೀಪ, ಸಂತೋಷ ಹಿರೇ, ರಾಧಾ, ತುಳಜಾರಾಮ, ವೆಂಕಟೇಶ ದೇವದುರ್ಗಾ, ಪ್ರೀತಿ ದೊಡ್ಡಮನಿ, ಈಶ್ವರ, ರಮೇಶ ದೇವಕರ, ವಿಶಾಲಾಕ್ಷಿ ಪಾಟೀಲ, ಶಿವರಾಜ, ಸಾಬಮ್ಮ, ಭೀಮು ಆಂದೋಲಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸರ್ಕಾರ ದರ ಏರಿಕೆ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದರು.






