Kalaburagi | ಕಬ್ಬು ಬೆಳೆಗಾರರ 13 ಕೋಟಿ ರೂ. ಬಾಕಿ ಹಣ ಬಿಡುಗಡೆಗೆ ಆಗ್ರಹ

ಕಲಬುರಗಿ: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಪಾವತಿಯಾಗಬೇಕಿರುವ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕೂಡಲೇ ಬಾಕಿ ಹಣ ಪಾವತಿ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸಬೇಕೆಂಬ ನಿಯಮವನ್ನು ಸಕ್ಕರೆ ಕಾರ್ಖಾನೆಗಳು ಉಲ್ಲಂಘಿಸಿವೆ. ಕಬ್ಬು ನುರಿಸಿ 7 ತಿಂಗಳುಗಳೇ ಕಳೆದರೂ ರೈತರಿಗೆ ಹಣ ತಲುಪುವಂತಹ ಹಣ ಪಾವತಿಸಿಲ್ಲ, ಅಂತಹ ಕಾರ್ಖಾನೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಲಕ್ಷಾಂತರ ಟನ್ ಕಬ್ಬು ನುರಿಸಿದ್ದರೂ ಚಿಂಚೋಳಿ ಸಿದ್ದಶ್ರೀ ಎಥೆನಾಲ್ ಸಂಸ್ಥೆಯಿಂದ ಸುಮಾರು 13 ಕೋಟಿ ರೂ. ಬಾಕಿ ಉಳಿದಿದೆ. ರೈತರಿಗೆ ಪಾವತಿಸಬೇಕಿರುವ ಈ ಬಾಕಿ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಿಸಬೇಕು ಹಾಗೂ ನಿಯಮಾನುಸಾರ ಶೇ.16ರ ಬಡ್ಡಿ ಸಮೇತ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಈ ಕುರಿತು ತಜ್ಞರ ಸಮಿತಿ ರಚಿಸಿ ಸಮಗ್ರ ಪರಿಶೀಲನೆ ನಡೆಸಬೇಕು. ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಚಂದಪ್ಪ ಪೂಜಾರಿ, ದಿಲೀಪ್ ನಾಗೂರೆ, ದೇವು ಬಿರಾದಾರ, ಸಾಯಬಣ್ಣಾ ಕೊರಬಾ, ಬಾಬು ಮೆಳಕುಂದಿ, ಶಿವಕುಮಾರ ಹೇರೂರು ಸೇರಿದಂತೆ ಹಲವರು ಭಾಗವಹಿಸಿದ್ದರು.






