Kalaburagi | ಜಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳ ಆರಂಭ: ಡಾ.ಉಮೇಶ್

ಕಲಬುರಗಿ: ಅತ್ಯಂತ ಬಡ ಹಾಗೂ ಅಗತ್ಯವಿರುವ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆ ತನ್ನ ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಯಶಸ್ವಿಯಾಗಿ ಆರಂಭಿಸಿದೆ ಎಂದು ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್. ಹೇಳಿದರು.
ನಗರದ ಜಿಮ್ಸ್ ಆಸ್ಪತ್ರೆಯ 10ನೇ ಮಹಡಿಯ ಆಡಿಟೋರಿಯಂನಲ್ಲಿ ಶನಿವಾರ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಸಾಮಾನ್ಯ ವೈದ್ಯಕೀಯ ವಿಭಾಗಗಳು, ಕೆಎಸ್‌ಸಿ–ಎಎಸ್‌ಐ ಹಾಗೂ ಎಪಿಐ ಕಲಬುರಗಿ ಶಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಎಚ್‌ಪಿಬಿ ಅಪ್‌ಡೇಟ್ಸ್’ ಸಿಎಂಇ/ಸಿಎಸ್‌ಇ ವೈಜ್ಞಾನಿಕ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, ಯಕೃತ್ತು, ಪಿತ್ತಕೋಶ ಹಾಗೂ ಮೇದೋಜೀರಕ ಗ್ರಂಥಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳು, ಎಂಡೋಸ್ಕೋಪಿ, ಲ್ಯಾಪರೊಸ್ಕೋಪಿ ಸೇರಿದಂತೆ ಹಲವು ಆಧುನಿಕ ವೈದ್ಯಕೀಯ ಸೇವೆಗಳು ಲಭ್ಯವಿವೆ. ಆಸ್ಪತ್ರೆಯ ಸೇವೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಗುಣಮಟ್ಟದ ಚಿಕಿತ್ಸೆಯನ್ನು ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ತಲುಪಿಸುವುದೇ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
ಜಿಮ್ಸ್ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಡಾ. ಶಿವಕುಮಾರ್ ಸಿ. ರಾಜೇಶ್ವರ್ ಮಾತನಾಡಿ, ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಸರ್ಜರಿ ಹಾಗೂ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಸೇರಿದಂತೆ ಹಲವು ವಿಶೇಷ ಚಿಕಿತ್ಸಾ ಸೌಲಭ್ಯಗಳು ಈಗಾಗಲೇ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಆಯೋಜನಾ ಕಾರ್ಯದರ್ಶಿ ಡಾ. ಮಹಮ್ಮದ್ ಎಫ್.ಆರ್. ಶೋಯೆಬ್ ಅವರು ‘ಯಕೃತ್ತಿನ ಪರೀಕ್ಷೆಗಳ ವಿಶ್ಲೇಷಣೆ ಮತ್ತು ರೋಗನಿರ್ಣಯ’ ಕುರಿತು ಉಪನ್ಯಾಸ ನೀಡಿ, ಯಕೃತ್ತಿನ ಪರೀಕ್ಷೆಗಳ ವರದಿಯನ್ನು ರೋಗಲಕ್ಷಣಗಳೊಂದಿಗೆ ಸಮಗ್ರವಾಗಿ ವಿಶ್ಲೇಷಿಸಿದಾಗ ಮಾತ್ರ ನಿಖರವಾದ ರೋಗನಿರ್ಣಯ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಡಾ. ಮಹೇಶ್ ಶೆಟ್ಟಿ ಅವರು ‘ಪ್ಯಾಂಕ್ರಿಯಾಟಿಕ್ ಸ್ಯೂಡೋಸಿಸ್ಟ್ ನಿರ್ವಹಣೆ ಮತ್ತು ಶಸ್ತ್ರಚಿಕಿತ್ಸೆ’ ವಿಷಯದ ಕುರಿತು ವೈಜ್ಞಾನಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಜೈರಾಜ್ ವಿ. ಬೊಮ್ಮನ್, ಡಾ. ರವಿಶಂಕರ್ ಬಿ., ಡಾ. ಪ್ರಸಾದ್ ಬಾಬು, ಡಾ. ವಿಶ್ವನಾಥ್ ರೆಡ್ಡಿ ಸೇರಿದಂತೆ ವಿವಿಧ ತಜ್ಞ ವೈದ್ಯರು, ಜಿಮ್ಸ್‌ನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.






