Kalaburagi | ಸುರಪುರಕ್ಕೆ ಯುನೆಸ್ಕೊ ಪಾರಂಪರಿಕ ತಾಣದ ಮಾನ್ಯತೆ ಪಡೆಯುವ ಅರ್ಹತೆಯಿದೆ: ನ್ಯಾ.ದಿನೇಶ

ಕಲಬುರಗಿ: ಐತಿಹಾಸಿಕ ಪರಂಪರೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ವೈಭವ ಹೊಂದಿರುವ ಸುರಪುರಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಎಲ್ಲ ಅರ್ಹತೆಗಳಿವೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ಆರಂಭವಾಗಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡಲು ಸಿದ್ಧನಿದ್ದೇನೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್.ದಿನೇಶ ಹೇಳಿದರು.
ನಗರದ ನ್ಯೂ ವೆಂಕಟಗಿರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಲಬುರಗಿಯಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೊಘಲ್ ದೊರೆ ಔರಂಗಜೇಬನನ್ನು ಸೋಲಿಸಿದ ಸುರಪುರದ ಅರಸರ ಸಾಹಸ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಹುತಾತ್ಮರಾದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು. ಸುರಪುರದಲ್ಲಿರುವ ನೂರಾರು ದೇವಸ್ಥಾನಗಳು, ಕೆರೆಗಳು, ಬಾವಿಗಳು ಸೇರಿದಂತೆ ಹಲವು ಐತಿಹಾಸಿಕ ತಾಣಗಳು ಈ ಪ್ರದೇಶದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿವೆ ಎಂದರು.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸುರಪುರದವರ ಕ್ಷೇಮಾಭಿವೃದ್ಧಿ ಸಂಘ ಕಳೆದ ಹತ್ತು ವರ್ಷಗಳಿಂದ ಉತ್ತಮ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಬೇಡಿಕೆಯಂತೆ ನಗರದ ಪ್ರಮುಖ ರಸ್ತೆಯೊಂದಕ್ಕೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಹೆಸರಿಡುವ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸುರಪುರ ಅಧ್ಯಯನ ಪೀಠ ಸ್ಥಾಪಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ ಮಾತನಾಡಿ, ತಮ್ಮ ತಂದೆ ದಿವಂಗತ ಆರ್.ವಿ.ಎನ್. ಅವರು ಸಂಘದೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಅವರಂತೆಯೇ ತಾವೂ ಸಂಘದ ಎಲ್ಲ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಂಘದ ಬೇಡಿಕೆಗಳ ಕುರಿತು ಪ್ರಸ್ತಾಪಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಡಾ. ಭೀಮಸೇನ ಎಸ್. ಗುಡೂರ್ ಸಂಘದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಿದರು.
ಸಂಘದ ಅಧ್ಯಕ್ಷ ಚನ್ನಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಗಂಗಾಧರ ಎಚ್. ಸುರಪುರ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಸ್. ಸುರಪುರ ಹಾಗೂ ಬಾಲಕೃಷ್ಣ ವಿ. ಸಾಲ್ವಡಗಿ ವೇದಿಕೆಯಲ್ಲಿದ್ದರು.
ಸಂಘದ ಕಾರ್ಯದರ್ಶಿ ನಾಗರಾಜ ಸುರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲೇಶಪ್ಪ ಗುಡೂರ್ ಸ್ವಾಗತಿಸಿದರು. ಜಿ.ಚಿ. ವಣಿಕ್ಯಾಳ ನಿರೂಪಿಸಿ, ವಂದಿಸಿದರು.
ಡಾ. ಎಲ್.ಎಸ್. ರಾಠಿ, ಪಿಡ್ಡಪ್ಪ ಜಾಲಗಾರ, ನಂದಕುಮಾರ ಮಾಲಿಪಾಟೀಲ, ವಿಠಲ ಜಾದವ, ಬಿ.ಪಿ. ಹೂಗಾರ, ವೆಂಕಟೇಶ ನೀರಕಗಿ ಸೇರಿದಂತೆ 300ಕ್ಕೂ ಹೆಚ್ಚು ಜನರು, ಮಹಿಳೆಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.






