ಕಲಬುರಗಿ | ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಅನುಮಾನಾಸ್ಪದ ಸಾವು
ವಿಚಾರಣೆ ಹೆಸರಲ್ಲಿ ಪೊಲೀಸರು ಥಳಿಸಿ ಹತ್ಯೆಗೈದಿದ್ದಾರೆ: ಕುಟುಂಬಸ್ಥರ ಆರೋಪ

ಕಲಬುರಗಿ : ನಾಪತ್ತೆಯಾಗಿದ್ದ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ವಿಚಾರಣೆಯಲ್ಲಿ ಮೂರ್ನಾಲ್ಕು ದಿನದಿಂದ ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಚಾರಣೆ ಹೆಸರಲ್ಲಿ ಆರೋಪಿಯನ್ನು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಮೃತ ಆರೋಪಿ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೃಷ್ಣಾ ರಾಠೋಡ್ ಅನುಮಾನಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. ಮೂರು ನಾಲ್ಕು ದಿನಗಳಿಂದ ರೋಜಾ ಪೊಲೀಸರ ವಶದಲ್ಲಿದ್ದ ಆರೋಪಿ ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಆರೋಪಿಯ ಕುಟುಂಬಸ್ಥರಿಗೆ ಪೊಲೀಸರು ಬೆಳಿಗ್ಗೆಯಿಂದ ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿಕೆ ನೀಡಲು ಆಮಿಷೆ ಮತ್ತು ಒತ್ತಡ ಹಾಕಲಾಗಿದೆ ಎಂದು ಮೃತ ಆರೋಪಿ ಸಹೋದರ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ :
ಜ.24 ರಂದು ಕಲಬುರಗಿ ನಗರದ ಮಿಜಗುರಿ ಕ್ರಾಸ್ ನಿಂದ ಮೈನಾಬಾಯಿ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಯ ನಾಪತ್ತೆ ಪ್ರಕರಣದ ತನಿಖೆ ವೇಳೆ ಕೃಷ್ಣಾ ರಾಠೋಡ್ ಅನುಮಾನಸ್ಪದವಾಗಿ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.
ಸಿಸಿಟಿವಿಯ ದೃಶ್ಯದ ಆಧಾರದ ಮೇಲೆ ಆರೋಪಿ ಕೃಷ್ಣಾ ರಾಠೋಡ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೈನಾಬಾಯಿಯ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಮೃತದೇಹಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ರವಿವಾರ ರಾತ್ರಿ ಆರೋಪಿ ಕಲಬುರಗಿ ಹೊರವಲಯದ ಹಾರುತಿ ಹಡಗಿಲ್ ಬಳಿ ಮಹಿಳೆಯ ಮೃತದೇಹ ಹೂತಿಟ್ಟ ಸ್ಥಳ ಮಹಾಜರಗೆ ಕರೆದೊಯ್ದರು. ಈ ವೇಳೆ ಕೃಷ್ಣಾ ರಾಠೋಡ್ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಈ ಕುರಿತು ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಬಂಜಾರ ಸಮಾಜದ ಮುಖಂಡರಿಂದ ಪ್ರತಿಭಟನೆ :
ಕೊಲೆ ಪ್ರಕರಣದಲ್ಲಿ ವಿಚಾರಣೆಗೆದು ಕರೆತಂದು ರೋಜಾ ಪೊಲೀಸರು ವ್ಯಕ್ತಿ ಹತ್ಯೆ ಮಾಡಿದ್ದಾರೆ. ಪ್ರಕರಣ ಕುರಿತು ಉನ್ನತ ತನಿಖೆ ನಡೆಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ತಪ್ಪು ಮಾಡಿದ ಪೊಲೀಸರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮೃತ ವ್ಯಕ್ತಿಗೆ ನ್ಯಾಯ ಒದಗಿಸಿ, ಕುಟುಂಬಸ್ಥರೊಬ್ಬರಿಗೆ ಸರಕಾರಿ ನೌಕರಿ ಮತ್ತು ಪರಿಹಾರ ನೀಡಬೇಕೆಂದು ಬಂಜಾರಾ ಸಮಾಜದ ಮುಖಂಡ ರಾಮಚಂದ್ರ ಜಾಧವ್ ಪ್ರತಿಭಟನೆಯ ವೇಳೆ ಆಗ್ರಹಿಸಿದ್ದಾರೆ.







