Kalaburagi | ಶಿಸ್ತು, ಕಾನೂನು ಜ್ಞಾನದಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ: ಅಮಿತ್ ಕುಮಾರ್ ದೇಶಪಾಂಡೆ

ಕಲಬುರಗಿ : ಶಿಸ್ತು, ನೈತಿಕತೆ ಹಾಗೂ ಕಾನೂನು ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮುದಾಯದ ಅಭಿವೃದ್ಧಿ ಮತ್ತು ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯವಾದಿ ಅಮಿತ್ ಕುಮಾರ್ ದೇಶಪಾಂಡೆ ಹೇಳಿದರು.
ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಐಕ್ಯೂಎಸಿ (IQAC) ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ‘ಫೇರ್‌ವೆಲ್ ಪಾರ್ಟಿ–2026’ ಕಾರ್ಯಕ್ರಮವನ್ನು ಆಡಿಟೋರಿಯಂ ಹಾಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗದೆ, ಸಮಾಜದ ಹೊಣೆಗಾರಿಕೆಯನ್ನು ಅರಿತು ಕಾನೂನು ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನ್ಯಾಯಸಮ್ಮತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಡಾ. ಅನಿಲ್ ತೆಂಗಳಿ ಹಾಗೂ ಕೆಪಿಇ ಸೊಸೈಟಿಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ್ ಶೀಲವಂತ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಪ್ಪ ಸುರನ್ ವಹಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಚಂದ್ರಶೇಖರ್, ಸ್ತ್ರೀ-ಶಕ್ತಿ ಕೇಂದ್ರದ ಸಮನ್ವಯಾಧಿಕಾರಿ ಡಾ.ಅಪರ್ಣಾ ಜೆ. ಶಿಂಡೆ, ಐಕ್ಯೂಎಸಿ ಸಹಸಂಯೋಜಕ ಡಾ. ತಿಪ್ಪೇಸ್ವಾಮಿ ಎಸ್., ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಮಹಾಂತೇಶ್ ಬಿದ್ನೂರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎಸ್.ಆರ್.ಎಲ್.ಕೆ.ಜಿ. ಜವಾಲಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಶುಭ ಹಾರೈಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಮಾರಂಭಕ್ಕೆ ಮೆರುಗು ತಂದರು.






