ಕಲಬುರಗಿ| ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೊ ವೈರಲ್ ಬೆನ್ನಲ್ಲೆ ಸ್ವಾಮೀಜಿಯ ಬಂಧನ

ಕಲಬುರಗಿ: ಅಫಜಲಪುರ ತಾಲೂಕಿನ ಉಡಚಾಣ ಗ್ರಾಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಉದ್ಧಟತನ ಮೆರೆದ ಶ್ರೀ ಶಾಂತಲಿಂಗ ಶಿವಾಚಾರ್ಯರನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ.
ಶ್ರೀ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಸ್ವಾಮೀಜಿಯನ್ನು ಆಯುಧ ಕಾಯ್ದೆ ನಿಯಮದಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಬಳಿ ಇದ್ದ ಲೈಸೆನ್ಸ್ ಗನ್ ಸೀಝ್ ಮಾಡಿದ್ದಾರೆ.
ಇವರು ಕಳೆದ ವರ್ಷ ಇದೇ ಸ್ವಾಮೀಜಿ ಪಕ್ಕದ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡು ಮಠದಿಂದಲೇ ಪರಾರಿಯಾಗಿದ್ದರು.
ಇದೇ ಸ್ವಾಮೀಜಿ ಇತ್ತೀಚೆಗೆ ಉಡಚಾಣ ಗ್ರಾಮದ ಶ್ರೀ ಶಂಕರಲಿಂಗೇಶ್ವರ ಮಠದ ಜಾತ್ರೆ ಇರುವ ಸಂದರ್ಭದಲ್ಲಿ ಈ ಮಠಕ್ಕೆ ನಾನೇ ಮಠಾಧಿಪತಿ, ಹೀಗಾಗಿ ಜಾತ್ರೆ ಸಂದರ್ಭದಲ್ಲಿ ಪೂಜೆ ಪುನಸ್ಕಾರಗಳು ನಡೆಸಿಕೊಡಲು ಅವಕಾಶ ನೀಡಬೇಕೆಂದು ಪೊಲೀಸ್ ಭದ್ರತೆಯೊಂದಿಗೆ ಗ್ರಾಮಕ್ಕೆ ಬಂದು ಜಾತ್ರೆಯ ವಿಧಿ ವಿಧಾನಗಳನ್ನು ಗ್ರಾಮಸ್ಥರ ವಿರೋಧದ ನಡುವೆಯೂ ನಡೆಸಿದ್ದರು.







