ಕಲಬುರಗಿ: ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ; ವಿಡಿಯೊ ವೈರಲ್

ಕಲಬುರಗಿ: ಸ್ವಾಮೀಜಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಉದ್ಧಟತನ ಮೆರೆದಿರುವ ಘಟನೆ ಅಫಜಲಪುರ ತಾಲೂಕಿನ ಉಡಚಾಣ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಗಾಳಿಯಲ್ಲಿ ಗುಂಡು ಹಾರಿಸಿರುವ ಸ್ವಾಮೀಜಿಯಾಗಿದ್ದಾರೆ. ಸ್ವಾಮೀಜಿ ಗುಂಡು ಹಾರಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇವರು ಕಳೆದ ವರ್ಷ ಪಕ್ಕದ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡು ಮಠದಿಂದಲೇ ಪರಾರಿಯಾಗಿದ್ದರು.
ಇದೇ ಸ್ವಾಮೀಜಿ ಇತ್ತೀಚೆಗೆ ಉಡಚಾಣ ಗ್ರಾಮದ ಶ್ರೀ ಶಂಕರಲಿಂಗೇಶ್ವರ ಮಠದ ಜಾತ್ರೆ ಇರುವ ಸಂದರ್ಭದಲ್ಲಿ ಈ ಮಠಕ್ಕೆ ನಾನೇ ಮಠಾಧಿಪತಿಯಾಗಿದ್ದೇನೆ, ಹೀಗಾಗಿ ಜಾತ್ರೆ ಸಂದರ್ಭದಲ್ಲಿ ಪೂಜೆ ಪುನಸ್ಕಾರಗಳು ನಡೆಸಿಕೊಡಲು ಅವಕಾಶ ನೀಡಬೇಕೆಂದು ಪೊಲೀಸ್ ಭದ್ರತೆಯೊಂದಿಗೆ ಗ್ರಾಮಕ್ಕೆ ಬಂದು ಜಾತ್ರೆಯ ವಿಧಿ ವಿಧಾನಗಳನ್ನು ಗ್ರಾಮಸ್ಥರ ವಿರೋಧದ ನಡುವೆಯೂ ನಡೆಸಿದ್ದರು.
ಆದರೆ ಈಗ ಸ್ವಾಮೀಜಿ ಮಠದ ಆವರಣದಲ್ಲೇ ನಿಂತುಕೊಂಡು ರವಿವಾರ ಸಂಜೆ ಸಿಂಗಲ್ ಬ್ಯಾರೆಲ್ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.







