ಕಲಬುರಗಿ | ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ತಪಾಸಣೆ ಮಾಡಿಕೊಳ್ಳಿ : ನ್ಯಾ.ಮುಹಮ್ಮದ್ ನವಾಝ್

ಕಲಬುರಗಿ: ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದ ಕಾರಣ ಆರೋಗ್ಯದ ಕಡೆಗೆ ಗಮನ ಹರಿಸದಿದ್ದರಿಂದ ಆರೋಗ್ಯದಲ್ಲಿ ಹಠಾತ್ತನೆ ಏರುಪೇರು ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಕಾಲಕಾಲಕ್ಕೆ ಅರೋಗ್ಯ ತಪಾಸಣೆಗೆ ಮಾಡಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಾಧೀಶರು ಹಾಗೂ ಕಲಬುರಗಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಬಾರ್ ಅಸೋಸಿಯೇಷನ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ, ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ, ಆಯುಷ್ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ ಆರೋಗ್ಯ ಶಿಬಿರ ಮತ್ತು ಹೃದಯದ ಆರೈಕೆ ಕುರಿತು ಉಪನ್ಯಾಸ ಕಾರ್ಯಕ್ರಮನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತೀವ್ರ ಅರೋಗ್ಯ ಸಮಸ್ಯೆ ಕಂಡಾಗ ವೈದ್ಯರನ್ನು ಕಾಣುವ ಪರಿಪಾಟ ನಮ್ಮದಾಗಿದೆ. ಇಂತಹ ಮನಸ್ಥಿತಿ ಸಾರ್ವಜನಿಕರಲ್ಲಿ ಬದಲಾಗಬೇಕಿದೆ. ಇತ್ತೀಚೆಗೆ ಇಲ್ಲಿಯೆ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಿದ ಸಂದರ್ಭದಲ್ಲಿಯೇ ಯುವ ನ್ಯಾಯಾಧೀಶರು ಹೃದಯಾಘಾತಕ್ಕೆ ಒಳಗಾಗಿದನ್ನು ನೆನೆದು ವಿಷಾದ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರತಿಯೊಬ್ಬರು ತಮ್ಮ ಆರೋಗ್ಯ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಕರೆ ನೀಡಿದರು.
ಆಯುಷ್ ಅಧಿಕಾರಿ ಡಾ. ಗಿರಿಜಾ ಎಸ್.ಜಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನ ತಪಾಸಣೆ ಮಾಡಿಸಿದರು.
ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ.ಎಲ್ ಲಕ್ಣ್ಮೀನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ವಕೀಲರ ಸಂಘದ ಅಧ್ಯಕ್ಷ ಎಸ್.ವಿ ಪಸಾರ್, ಕಾರ್ಯದರ್ಶಿ ಸಿದ್ದರಾಮ ಬಿ. ವಾಡಿ, ನ್ಯಾಯಾಂಗ ನೌಕರ ಸಂಘದ ಅಧ್ಯಕ್ಷ ಸುನೀಲಕುಮಾರ ಚಾಂಡೆ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.
1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ ಆನಂದ ಸ್ವಾಗತಿಸಿದರು. 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಸವರಾಜ ಸನದಿ ವಂದಿಸಿದರು.







