ಕಲಬುರಗಿ | ಜಾತಿ ಭೇದವಿಲ್ಲದೆ ಕ್ಷೌರ ಸೇವೆ ಮಾಡಲು ತಾಲೂಕು ಹಡಪದ ಸಂಘ ಕರೆ

ಕಲಬುರಗಿ: ಜಾತಿ ಭೇದವಿಲ್ಲದೆ ಸರ್ವ ಸಮುದಾಯದ ಜನರಿಗೆ ಕ್ಷೌರ ಸೇವೆ ಒದಗಿಸುವಂತೆ ತಾಲೂಕು ಹಡಪದ ಸಂಘದ ಅಧ್ಯಕ್ಷ ಶಂಕರ್ ಎಸ್. ಹಡಪದ ಮತ್ತು ಸವಿತಾ ಸಮಾಜದ ಶರಣು ಜಾಧವ್ ಜಂಟಿಯಾಗಿ ಕರೆ ನೀಡಿದರು.
ಆಳಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರರಾದ ರಮೇಶ್ ಲೋಹಾರ ಮತ್ತು ಅಖಿಲ ಭಾರತ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು ಮಾತನಾಡಿದರು.
ಆಳಂದ ಪಟ್ಟಣದ ಪುರಸಭೆ ಮತ್ತು ಗ್ರಾಮೀಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿರುವ ಕ್ಷೌರ ಅಂಗಡಿಗಳಲ್ಲಿ ಈ ಸಂದೇಶವನ್ನು ಜಾರಿಗೊಳಿಸುವಂತೆ ಅವರು ಸಮಾಜದ ಕ್ಷೌರ ಶ್ರಮಿಕರಿಗೆ ಸಲಹೆ ನೀಡಿದರು.
"ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾತಿ ಭೇದವಿಲ್ಲದೆ ಕ್ಷೌರ ಸೇವೆ ಒದಗಿಸುವುದು ಮಹತ್ವದ ಕ್ರಮವಾಗಿದೆ. ಇದು ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಬೆಳೆಸುತ್ತದೆ. ಇದಕ್ಕೆ ನ್ಯಾವ್ಯಾರು ಹಿಂದೇಟು ಹಾಕಬಾರದು ಎಂದು ಕ್ಷೌರ ಕೆಲಸಗಾರರಿಗೆ ಅವರು ಸಲಹೆ ನೀಡಿದರು.
ಇತ್ತೀಚೆಗೆ ತಾಲೂಕಿನ ಕಿಣ್ಣಿಸುಲ್ತಾನ್ ಗ್ರಾಮದಲ್ಲಿ ಜಾತಿಗೆ ಸಂಬಂಧಿಸಿದಂತೆ ಕ್ಷೌರ ಸೇವೆಗೆ ತಾರತಮ್ಯದ ಘಟನೆಗಳು ವರದಿಯಾಗಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪಂಡಿತ್ ಸಲಗರ, ಹಡಪದ ಸಮಾಜದ ಹನುಮಂತ, ಸವಿತಾ ಸಮಾಜದ ಶಿವಾನಂದ ಭಕ್ರೆ, ಮಾರುತಿ ಶಿಂದೆ, ಕಲ್ಯಾಣಿ ತುಕಾಣಿ ಮತ್ತಿತರರು ಉಪಸ್ಥಿತರಿದ್ದರು.







