ಕಲಬುರಗಿ | ನನಗೆ ಗನ್ ಸಿಕ್ಕರೆ ಭ್ರಷ್ಟ ಅಧಿಕಾರಿಗಳನ್ನು ಉಡಾಯಿಸುವೆ ಎಂದ ಶಿಕ್ಷಕ : ವೀಡಿಯೊ ವೈರಲ್

ಕಲಬುರಗಿ, ಸೆ.5: ಕುಡಿದ ಮತ್ತಿನಲ್ಲಿ ಸಿಗರೇಟ್ ಸೇದುತ್ತಾ ಶಿಕ್ಷಕನೋರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಂಚೋಳಿ ತಾಲೂಕಿನ ಶೇರಿಭಿಕನಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುರಾಜ ಕುಲಕರ್ಣಿ ಎಂಬವರು ಕುಡಿದ ಮತ್ತಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನಿಂದಿಸಿರುವ ಶಿಕ್ಷಕನಾಗಿದ್ದಾನೆ.
’ಇಲಾಖೆಯ ಅಧಿಕಾರಿಗಳೆಲ್ಲ ಹಣಕ್ಕಾಗಿ ಪೀಡಿಸುತ್ತಿದ್ದು ಭ್ರಷ್ಟರಾಗಿದ್ದಾರೆ. ಒಂದು ಸಾರಿ ನನ್ನನ್ನು ಸಸ್ಪೆಂಡ್ ಮಾಡುತ್ತಾರೆ. ಸಸ್ಪೆಂಡ್ ಮಾಡಿದರೂ ನಾನೇನೂ ಹೆದರಲ್ಲ. ಸಸ್ಪೆಂಡ್ ಅಂದ್ರೆ ಏನು? ಮೂರು ತಿಂಗಳು ಮನೆಯಲ್ಲೇ ಇದ್ದು ಅರ್ಧ ಪಗಾರ ತಗೊಳೋದು. ಮತ್ತೆ ಬೇಡಿದ್ದ ಜಾಗಕ್ಕೆ ಹೋಗುವುದು. ವರ್ಗಾವಣೆ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದರ ಬದಲು ಅಮಾನತ್ತಾಗಿ ವರ್ಗಾವಣೆಯಾಗುವುದು ಶಾರ್ಟ್ ಕಟ್ ರಸ್ತೆಯಾಗಿದೆ’ ಎಂದು ಹೇಳಿದ್ದಾರೆ.
ನನ್ನ ಕೈಯಲ್ಲಿ ಗನ್ ಸಿಕ್ಕರೆ ಭ್ರಷ್ಟ ಅಧಿಕಾರಿಗಳನ್ನು ಉಡಾಯಿಸುವುದಾಗಿ ಹೆದರಿಸಿದ್ದಾರೆ. ಬಾಯಿ ಬಿಟ್ಟು ಇಷ್ಟು ಲಂಚ ಕೊಡಿ ಎಂದು ಹೇಳಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕ ಬೆದರಿಕೆ ಹಾಕಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಚಿಂಚೋಳಿಯ ಶೇರಿಭಿಕನಳ್ಳಿ ಶಾಲೆಯ ಶಿಕ್ಷಕ ಕುಡಿದು ಅಸಭ್ಯವಾಗಿ ವರ್ತಿಸಿರುವುದು ತೀರಾ ಅತಿರೇಕಕ್ಕೆ ಹೋಗಿದೆ. ಅಂತಹ ಶಿಕ್ಷಕರನ್ನು ಇಲಾಖೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಕೂಡಲೇ ಅವರನ್ನು ಶನಿವಾರ ಬೆಳಗ್ಗೆ 11 ಗಂಟೆಯ ಒಳಗಾಗಿಯೇ ಅಮಾನತ್ತು ಮಾಡುವಂತೆ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದ್ದೇನೆ.
- ಸೂರ್ಯಕಾಂತ ಮದಾನೆ, ಡಿಡಿಪಿಐ, ಕಲಬುರಗಿ







