Kalaburagi | ಶಿಕ್ಷಕರ ಸಾಹಿತ್ಯ ಸಮ್ಮೇಳನ ಗುರುವೃಂದಕ್ಕೆ ಸಂದ ಗೌರವ

ಕಲಬುರಗಿ, ಜು. 6: ಸಾಹಿತ್ಯವು ಸಮಾಜದ ನಿಜವಾದ ಕನ್ನಡಿಯಾಗಿದ್ದು, ಅದರ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿಕ್ಷಕರಿಗಾಗಿಯೇ ವಿಶೇಷ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಶಿಕ್ಷಕ ಸಮುದಾಯಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಪಿ. ಚವ್ಹಾಣ ಹಾಗೂ ಜಿಲ್ಲಾ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಜು.19ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಶಿಕ್ಷಕ-ಸಾಹಿತಿ ರಾಜೇಂದ್ರ ಝಳಕಿ ಅವರಿಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಮತ್ತು ಶಿಕ್ಷಣದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಶಿಕ್ಷಕರಿಗೆ ವಿಶೇಷ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
“ಶಿಕ್ಷಕರು ಕನ್ನಡ ಸಾಹಿತ್ಯ ಪರಿಷತ್ತಿನ ದೊಡ್ಡ ಶಕ್ತಿಯಾಗಿದ್ದು, ಅವರು ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಪರಿಷತ್ತಿನ ಕರ್ತವ್ಯವಾಗಿದೆ” ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಶಿಕ್ಷಕ-ಸಾಹಿತಿ ರಾಜೇಂದ್ರ ಝಳಕಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ತಮ್ಮ ಸೇವೆಯನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡಿರುವುದು ಸಂತಸ ತಂದಿದೆ. ಹೊಸ ಪೀಳಿಗೆಯಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಮುಖರಾದ ಪ್ರಮೀಳಾ ಪಾಟೀಲ, ಚಂದ್ರಕಲಾ, ರೇಣುಕಾ ಎನ್., ಲಕ್ಷ್ಮಿ ಇಲಕಲ್, ಕಲಾವತಿ ನೆಲೋಗಿ, ಕವಿತಾ ಪಾಟೀಲ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಜ್ಯೋತಿ ಕೋಟನೂರ ಸೇರಿದಂತೆ ಅನೇಕ ಶಿಕ್ಷಕರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.






