ಕಲಬುರಗಿ | ಜುಲೈನಲ್ಲಿ ಶಿಕ್ಷಕರ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಜುಲೈ ಎರಡನೇ ವಾರದಲ್ಲಿ ನಗರದ ಕನ್ನಡ ಭವನದಲ್ಲಿ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಷತ್ತಿನ ಅಡಿಯಲ್ಲಿ ಇಂಥ ಅಪರೂಪದ ಅನೇಕ ಸಮ್ಮೇಳನಗಳು-ಕಾರ್ಯಕ್ರಮಗಳು ನಡೆಸಿ ಜಿಲ್ಲೆಯ ಜನರಿಂದ ಸೈ ಎನಿಸಿಕೊಳ್ಳಲಾಗಿದೆ. ಶಿಕ್ಷಕರು ತಮ್ಮ ದೈನಂದಿನ ಪಾಠ-ಪ್ರವಚನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಶಿಕ್ಷಕರು ನಮ್ಮ ಭಾಗದಲ್ಲಿದ್ದಾರೆ. ಅರಿವಿನ ಲೋಕದಲ್ಲಿ ಹಿರಿಯರಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಕೊಟ್ಟ ಅನೇಕ ಶಿಕ್ಷಕರನ್ನು ಒಂದುಗೂಡಿಸುವ ಮತ್ತು ಒಗ್ಗೂಡಿಸುವ ಪ್ರಯತ್ನ ಈ ಸಮ್ಮೇಳನದ್ದಾಗಿದೆ ಎಂದು ಅವರು ವಿವರಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಶ್ರೇಷ ವೃತ್ತಿ ಯಾವುದು ಅಂದರೆ ಅದು ಶಿಕ್ಷಕ ವೃತ್ತಿ . ನಮ್ಮ ಇಂದಿನ ಸಮಾಜದಲ್ಲಿನ ಅಂಕುಡೊoಕುಗಳನ್ನು ತಿದ್ದುವುದರ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಸದಾ ಮುಂಚೂಣಿಯಲ್ಲಿರುತ್ತಾರೆ. ಇಂಥ ಶಿಕ್ಷಕರಲ್ಲಿನ ಕಲೆ, ಸಂಗೀತ, ಸಾಹಿತ್ಯ ಹೀಗೆ ವಿಶೇಷ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ಪರಿಷತ್ತು ನೀಡುತ್ತಿರುವುದು ಶಿಕ್ಷಕರಲ್ಲಿ ಹೊಸ ಉತ್ಸಾಹ ಮೂಡಿಸಿದಂತಾಗಿದೆ. ಸಮ್ಮೇಳನದ ಯಶಸ್ವಿಗೆ ಶಿಕ್ಷಕರ ಸಂಘಟನೆಗಳು ಸಹಕರಿಸಲಿವೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರಮುಖರಾದ ಸಿದ್ಧಲಿಂಗ ಬಾಳಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ಹಣಮಂತರಾವ ಪೆಂಚನಪಳ್ಳಿ, ಶಿವಲೀಲಾ ಕಲಗುರ್ಕಿ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ದಿನೇಶ ಮದಕರಿ, ಗಣೇಶ ಚಿನ್ನಾಕಾರ, ಸೋಮಶೇಖರ ಮಠ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ಶಿವಾನಂದ ಸುರವಸೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.






