Kalaburagi | ಸಮಾಜ ದಿಕ್ಕುತಪ್ಪುವಲ್ಲಿ ಶಿಕ್ಷಕರ ನಿರ್ಲಕ್ಷ್ಯವೂ ಕಾರಣ : ಸಾಹೇಬಗೌಡ ಬಿರಾದಾರ

ಕಲಬುರಗಿ: ಶಿಕ್ಷಕರು ನಾಡಿನ ಶ್ರೀಮಂತ ಪರಂಪರೆಯ ವಾರಸುದಾರರಾಗಿದ್ದು, ಜ್ಞಾನ ಮತ್ತು ಮೌಲ್ಯಗಳ ವಾಹಕರಾಗಿದ್ದಾರೆ. ಶಿಕ್ಷಕರು ನಿರಂತರ ಕಲಿಕೆಯಲ್ಲಿರಬೇಕಾದ ಅನಿವಾರ್ಯತೆ ಇದೆ. ಸಮಾಜ ದಿಕ್ಕುತಪ್ಪುವಲ್ಲಿ ಶಿಕ್ಷಕರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ ಎಂದು ಬೆನಕನಹಳ್ಳಿಯ ಪ್ರೌಢಶಾಲೆಯ ಶಿಕ್ಷಕ ಹಾಗೂ ಸಾಹಿತಿ ಸಾಹೇಬಗೌಡ ಬಿರಾದಾರ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಭಾನುವಾರ ನಡೆದ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ‘ಅರಿವು ಅನಾವರಣ’ ಗೋಷ್ಠಿಯಲ್ಲಿ ‘ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಶಿಕ್ಷಕರು ಅಪಾರ ಜ್ಞಾನ ಸಂಪಾದಿಸಿಕೊಂಡು, ನಿರಂತರ ಓದು ಹಾಗೂ ಹೊಸತನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರು ಕಲಿಯುವ ಮತ್ತು ಕಲಿಸುವ ಎರಡೂ ಮಹತ್ವದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಹಿಂದೆ ಶಿಕ್ಷಕರ ಮಾತು ದಾಖಲಾಗುತ್ತಿತ್ತು. ಆದರೆ ಇಂದು ದಾಖಲೆಗಳೇ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಕರು ಗುರುಗಳಾಗಿ ಜ್ಞಾನಧಾರೆಯನ್ನು ಹರಿಸಿದರೆ ಅದನ್ನು ಗೌರವಿಸುವ ಶಿಷ್ಯರು ಇಂದಿಗೂ ಇದ್ದಾರೆ. ಆದರೆ ಶಿಕ್ಷಕರ ತ್ಯಾಗ ಮತ್ತು ಸಮರ್ಪಣಾಭಾವ ಇನ್ನಷ್ಟು ಹೆಚ್ಚಾಗಬೇಕಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ ಹಾಗೂ ದರೋಡೆಗಳಂತಹ ಘಟನೆಗಳು ಶಿಕ್ಷಣದಲ್ಲಿನ ಮೌಲ್ಯಗಳ ಕುಸಿತವನ್ನೂ ಸೂಚಿಸುತ್ತವೆ. ಪಠ್ಯದಲ್ಲಿರುವ ಮೌಲ್ಯಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಿಲ್ಲ. ಶಿಕ್ಷಕರು ‘ಪಾಸ್ ಬುಕ್ ಮಾಸ್ಟರ್’ಗಳಾಗಿದ್ದರೆ, ವಿದ್ಯಾರ್ಥಿಗಳು ‘ಟೆಕ್ಸ್ಟ್ ಬುಕ್ ವಿದ್ಯಾರ್ಥಿ’ಗಳಾಗುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಾತನಾಡಿದ ಗಿರೀಶ ಕಡ್ಲೆವಾಡ, ‘ಶೈಕ್ಷಣಿಕ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು’ ವಿಷಯ ಕುರಿತು ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಅಂಕಗಳ ಭಾರ ಹಾಗೂ ಶಿಕ್ಷಕರ ಮೇಲೆ ದಾಖಲೆಗಳ ಒತ್ತಡ ಹೆಚ್ಚುತ್ತಿದೆ. ಮನೋಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯತ್ತ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ-ಶಿಕ್ಷಕ ಡಾ. ಡಿ.ಎನ್. ಪಾಟೀಲ ಅವರು ಸಮ್ಮೇಳನಾಧ್ಯಕ್ಷ ರಾಜೇಂದ್ರ ಝಳಕಿ ಅವರ ಬದುಕು ಮತ್ತು ಸಾಹಿತ್ಯ ಕುರಿತು ಮಾತನಾಡಿ, ಅವರ ಜೀವನ ಹಾಗೂ ಬರಹ ಎರಡೂ ಒಂದೇ ದಾರಿಯಲ್ಲಿ ಸಾಗಿದ್ದು, ಬಡತನದ ಕಷ್ಟಗಳನ್ನು ಅನುಭವಿಸಿ ಬೆಳೆದ ಅವರ ಸಾಹಿತ್ಯ ಜನಮನ ಗೆದ್ದಿದೆ ಎಂದು ಹೇಳಿದರು.
ಸಂಘ-ಸಂಸ್ಥೆಗಳ ಪ್ರತಿನಿಧಿ ಕಲ್ಯಾಣಕುಮಾರ ಸಿಲುವಂತ್ ಮಾತನಾಡಿ, ಶಿಕ್ಷಕರು ಸಮಾಜದ ಪ್ರತಿಬಿಂಬವಾಗಿದ್ದು, ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿ ಅವರಲ್ಲಿದೆ. ಶಿಕ್ಷಕ ಸಾಹಿತಿಗಳನ್ನು ಗೌರವಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಬಿರಾದಾರ, ನಂದಿನಿ ಸನಬಾಳ, ರೇಣುಕಾ ಡಾಂಗೆ, ಚಂದ್ರಶೇಖರ ಪಾಟೀಲ ಯಳಸಂಗಿ, ಮರೇಪ್ಪ ಬಸವಪಟ್ಟಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕವಯತ್ರಿ ಕವಿತಾ ಹಳ್ಳಿ ಗೋಷ್ಠಿ ನಿರೂಪಿಸಿದರೆ, ಸಿದ್ದಲಿಂಗ ಬಾಳಿ ಕಾರ್ಯಕ್ರಮ ಸಂಯೋಜಿಸಿದರು.






