Kalaburagi | ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ನೀಲಕಂಠರಾವ ಮೂಲಗೆ

ಕಲಬುರಗಿ: ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಮೇಲೆ ಸಾಮಾಜಿಕ ಪರಿವರ್ತನೆಯ ವಿಚಾರದಲ್ಲಿ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿಕ್ಷಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹೃದಯಾಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನಧಾರೆ ಎರೆದ ಗುರುಗಳಿಗೆ ನಾವು ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ. ಇದು ಸಮಾಜದಲ್ಲಿ ಗುರು ಸ್ಥಾನಕ್ಕೆ ಇರುವ ಘನತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಗುಣಾತ್ಮಕ ಶಿಕ್ಷಣ ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ನಾಡಿನ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಸಮಾಜದಲ್ಲಿ ವೃತ್ತಿಯ ಗೌರವವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ನ್ಯಾಯವಾದಿ ಆರತಿ ತಿವಾರಿ ಮಾತನಾಡಿ, ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬೇಕಾದರೆ ಶಿಕ್ಷಕರಿಂದಲೇ ಅದು ಸಾಧ್ಯ. ಎಲ್ಲ ಕ್ಷೇತ್ರಗಳಿಗಿಂತಲೂ ಶಿಕ್ಷಣಕ್ಕೆ ಹೆಚ್ಚಿನ ಗೌರವವಿದೆ. ಮಕ್ಕಳ ಸಾಧನೆಯ ಹಿಂದೆ ಗುರುವಿನ ಸ್ಥಾನ ಹಿರಿದಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಹೊಣೆಗಾರಿಕೆ ಹೆಚ್ಚಿದೆ ಎಂದರು.
ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ, ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೋಜನಗೌಡ ಪಾಟೀಲ, ಯುವ ಮುಖಂಡ ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಜಿಲ್ಲಾ ಸಿದ್ಧಲಿಂಗ ಬಾಳಿ, ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಹಾಗೂ ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ ಮಾತನಾಡಿದರು.
ಪ್ರಮುಖರಾದ ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಡಾ. ರೆಹಮಾನ್ ಪಟೇಲ್, ಗಣೇಶ ಚಿನ್ನಾಕಾರ, ಅಮೃತಪ್ಪ ಅಣೂರ, ಎಚ್.ಎಸ್. ಬರಗಾಲಿ, ಸೋಮಶೇಖರಯ್ಯ ಹೊಸಮಠ, ಸಂತೋಷ ಕಲಮೂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀ ಪಾಟೀಲ, ಅಪ್ಪಯ್ಯ ಹಿರೇಮಠ, ಅಂಬುಜಾ ದೇಶಪಾಂಡೆ, ಸೋಮಶೇಖರ ಹಿರೇಮಠ, ವಹಾಬ್ ಪಟೇಲ್, ಸಂಗೀತಾ ಠಾಕೂರ, ರಾಜಶೇಖರ ಶ್ರೀಮಂಟ, ಹಣಮಂತ ರೆಡ್ಡಿ, ರಾಘವಾಚಾರ್ಯ ಜೋಶಿ, ಚೆನ್ನಮ್ಮ ಗುಣಾರಿ, ಚಂದ್ರಕಾಂತ ಬಬಲಾದಕರ್, ಮಹಾದೇವ ಗುಣಕಿ, ದಶರಥ ಅಂತಾವರ್, ಸಂಗ್ರಾಮ್ ಉಚ್ಚೇದ್, ಶಂಕರ ಭಾವಿಮನಿ, ರಾಧಿಕಾ ಹೊಸೂರ, ಪರಮೇಶ್ವರ ಕುಂಬಾರ, ನಿಂಗಪ್ಪ ಪೂಜಾರಿ, ಸರಸ್ವತಿ ಲಚ್ಯಾಣ, ಸೂರ್ಯಕಾಂತ ನಿಂಬರ್ಗಾ, ಸಿದ್ದಪ್ಪ ಹೂಗಾರ, ಅನಿತಾ ಕಾಂಬಳೆ ಹಾಗೂ ವಿಜಯಕುಮಾರ ಕೋಲಕುಂದಾ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು.






