ಕಲಬುರಗಿ | ಶಿಕ್ಷಕರು ಹೊಸ ವಿಷಯಗಳಿಗೆ ಅಪ್‌ಡೇಟ್ ಆಗಬೇಕು: ಪ್ರೊ.ಶಶಿಕಾಂತ್ ಉಡಿಕೇರಿ

ಕಲಬುರಗಿ: ಹೊಸ ವಿಷಯಗಳು ಮತ್ತು ತಂತ್ರಜ್ಞಾನಗಳಿಗೆ ಶಿಕ್ಷಕರು ಸದಾ ಅಪ್‌ಡೇಟ್ ಆಗಿರಬೇಕು. ಜ್ಞಾನ ಮತ್ತು ಕಲಿಕೆ ಯಾರೊಬ್ಬರ ಸ್ವತ್ತಲ್ಲ. ಬೋಧನೆಯಲ್ಲಿ ನಾವೀನ್ಯತೆ, ವೈಜ್ಞಾನಿಕ ಚಿಂತನೆ ಹಾಗೂ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಉತ್ಕೃಷ್ಟ ಜ್ಞಾನಶಕ್ತಿಯನ್ನು ಗಳಿಸಬೇಕು ಎಂದು ಪ್ರೊ. ಶಶಿಕಾಂತ್ ಉಡಿಕೇರಿ ಹೇಳಿದರು.
ನಗರದ ಗುಲ್ಬರ್ಗ ವಿಶ್ವವಿದ್ಯಾಲಯದ ಮಂಥನ ಸಭಾಂಗಣದಲ್ಲಿ ರೂಸಾ/ಪಿಎಂ–ಉಷಾ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ) ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ ಬೋಧನಾ ತಂತ್ರಗಳು ಮತ್ತು ಪಠ್ಯಕ್ರಮ ಚೌಕಟ್ಟು’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಬೋಧನೆ ಮತ್ತು ಪಠ್ಯ ವಿಷಯಗಳಲ್ಲಿ ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ತಂತ್ರಜ್ಞಾನ ಬಳಕೆಯೊಂದಿಗೆ ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸುವ ಶಕ್ತಿಯನ್ನು ಶಿಕ್ಷಕರು ಹೊಂದಿರಬೇಕು. ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಅರಿತು ಅವರಿಗೆ ಅಗತ್ಯಕ್ಕೆ ತಕ್ಕಂತೆ ಬೋಧನೆ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಎಚ್.ಟಿ.ಪೋತೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಕಲಿಕೆಯಿಗಿಂತ ನಾವೀನ್ಯತೆ ಮತ್ತು ಸೃಜನಶೀಲತೆಗೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿ ಕೇಂದ್ರಿತ ಬೋಧನೆಯ ಮೂಲಕ ಅವರನ್ನು ನೈಜ ಪ್ರಪಂಚದತ್ತ ಸೆಳೆಯಬೇಕು ಎಂದರು.
ವೈಜ್ಞಾನಿಕ ಮನೋಭಾವನೆ ಮತ್ತು ಉದ್ಯೋಗಾರ್ಹ ಕೌಶಲ್ಯಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳನ್ನು ಉನ್ನತ ಗುರಿ ಸಾಧನೆಗೆ ಸಿದ್ಧಗೊಳಿಸುವುದು ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.
ಬೋಧನೆಯಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಾದರೂ, ಅದರಿಂದ ಸೃಜನಶೀಲತೆ ಕುಂಠಿತವಾಗಬಾರದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸತ್ಯ, ನಿಖರತೆ ಹಾಗೂ ಆಧಾರಿತ ಗ್ರಂಥ–ಪುಸ್ತಕಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ. ಕಣ್ಣೂರು, ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಆರ್. ಎಲ್ ರಾಯಭಾಗಕರ್ ಅತಿಥಿಗಣ್ಯರನ್ನು ಸ್ವಾಗತಿದರು. ಡಾ. ಮಂಜುರ ಅಹ್ಮದ್ ದಖ್ಖಾನಿ, ಡಾ. ಮಂಜುಳ ಬೋವಿ, ಡಾ. ಅನಿಲ್ ಕುಮಾರ್ ಹಾಲು, ಡಾ.ಸಾವಿತ್ರಿ ಹಾಗೂ ಡಾ.ಹನುಮಂತರಾಯ ರಾಂಪೂರೆ ಅನಿಸಿಕೆ ವ್ಯಕ್ತಪಡಿಸಿದರು. ರೂಸಾ-ಪಿಎಂ ಉಷಾ ನೋಡಲ್ ಅಧಿಕಾರಿ ಡಾ.ವಿದ್ಯಾಧರ ಎಸ್.ಮೇಲಕೇರಿ ಎರಡು ದಿನಗಳ ಕಾರ್ಯಕ್ರಮ ಮತ್ತು ಗೋಷ್ಠಿ ವರದಿ ಮಂಡಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್, ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ. ಅಭಯ್ ಸರ್ದೇಶ್‌ಪಾಂಡೆ, ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಪೌಜಿತ ಇದ್ದರು.
ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾಕತೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ಮಹಾವಿದ್ಯಾಲಯಗಳ ಅಧ್ಯಾಪಕರು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.







