ಕಲಬುರಗಿ | ಅಪರೂಪದ ಹಿಪ್ ಜಾಯಿಂಟ್ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ

ಕಲಬುರಗಿ: ಲಕ್ಷಾಂತರ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುವ ಅಪರೂಪದ ಸ್ಪಾಂಡಿಲೋ ಎಪಿಫೈಸಿಯಲ್ ಡಿಸ್ಪ್ಲಾಸಿಯಾ (SED) ಎಂಬ ಹಿಪ್ ಜಾಯಿಂಟ್ ಕಾಯಿಲೆಯಿಂದ ಬಳಲುತ್ತಿದ್ದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಗರದ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ಹೊಸ ಜೀವನ ನೀಡಿದೆ.
ನಗರದ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ, ಅರ್ಥೋಪೆಡಿಕ್ ತಜ್ಞರಾದ ಡಾ. ಆದಿತ್ಯ ಕಾಜಾ ಮಾತನಾಡಿ, ಹಿಪ್ ಜಾಯಿಂಟ್‌ನ ದ್ವಿಪಾರ್ಶ್ವೀಯ (Bilateral) ಸ್ಪಾಂಡಿಲೋ ಎಪಿಫೈಸಿಯಲ್ ಡಿಸ್ಪ್ಲಾಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಹಲವು ವರ್ಷಗಳಿಂದ ತೀವ್ರ ನೋವು, ನಡೆಯಲು ತೊಂದರೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸಂಕಷ್ಟ ಅನುಭವಿಸುತ್ತಿದ್ದನು. ಈ ಅಪರೂಪದ ಕಾಯಿಲೆ ಸುಮಾರು ಒಂದು ಲಕ್ಷದಿಂದ ಎರಡು ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಂಡುಬರುತ್ತದೆ ಎಂದು ತಿಳಿಸಿದರು.
ಚಿಕಿತ್ಸೆಗಾಗಿ ರೋಗಿಯು ಕಲಬುರಗಿ, ಸೊಲ್ಲಾಪುರ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ, ಸ್ಥಳೀಯವಾಗಿ ಇಂತಹ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಕೆಲವರು ಮುಂಬೈನಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಬಳಿಕ ಸ್ನೇಹಿತರ ಸಲಹೆಯ ಮೇರೆಗೆ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ರೋಗಿಯನ್ನು ಆಸ್ಪತ್ರೆಯ ತಜ್ಞರ ತಂಡ ಸಮಗ್ರವಾಗಿ ಪರೀಕ್ಷಿಸಿ, ರೋಗವನ್ನು ನಿಖರವಾಗಿ ಪತ್ತೆಹಚ್ಚಿ ಚಿಕಿತ್ಸಾ ಯೋಜನೆ ರೂಪಿಸಿತು ಎಂದರು.
ರೋಗಿಯ ಎರಡೂ ಹಿಪ್ ಜಾಯಿಂಟ್‌ಗಳು ಹಾನಿಗೊಳಗಾಗಿದ್ದರಿಂದ ಮೊದಲು ಹೆಚ್ಚು ಸಮಸ್ಯೆ ಉಂಟುಮಾಡುತ್ತಿದ್ದ ಎಡಭಾಗದ ಹಿಪ್‌ಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಉತ್ತಮ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಲಭಾಗದ ಹಿಪ್ ಜಾಯಿಂಟ್‌ನ ಶಸ್ತ್ರಚಿಕಿತ್ಸೆಯನ್ನೂ ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ಹೇಳಿದರು.
ಎರಡೂ ಹಿಪ್ ಜಾಯಿಂಟ್‌ಗಳಿಗೆ ಟೋಟಲ್ ಹಿಪ್ ರಿಪ್ಲೇಸ್ಮೆಂಟ್ (Total Hip Replacement) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ಪ್ರಸ್ತುತ ರೋಗಿಯು ನೋವಿನಿಂದ ಸಂಪೂರ್ಣ ಮುಕ್ತನಾಗಿ ಸಾಮಾನ್ಯ ಜೀವನ ನಡೆಸುತ್ತಿರುವುದಾಗಿ ಡಾ. ಆದಿತ್ಯ ಕಾಜಾ ತಿಳಿಸಿದರು.
ರೋಗಿಯ ಚಿಕಿತ್ಸೆಯ ಅಗತ್ಯವನ್ನು ಮನಗಂಡ ಆಸ್ಪತ್ರೆಯ ವೈದ್ಯಕೀಯ ತಂಡ ವಿಶೇಷ ಪ್ರಯತ್ನದ ಮೂಲಕ ಚೆನ್ನೈನಿಂದ ಇಂಪ್ಲಾಂಟ್ ತರಿಸಿ, ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿತು. ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ನಿರ್ವಹಣಾ ತಂಡದ ಸಮನ್ವಯದಿಂದ ಅತ್ಯಾಧುನಿಕ ಚಿಕಿತ್ಸೆಯನ್ನು ಯಶಸ್ವಿಯಾಗಿ ಒದಗಿಸಲು ಸಾಧ್ಯವಾಯಿತು ಎಂದು ವೈದ್ಯರು ಹೇಳಿದರು.
ಸ್ಪಾಂಡಿಲೋಎಪಿಫೈಸಿಯಲ್ ಡಿಸ್ಪ್ಲಾಸಿಯಾ ಕಾಯಿಲೆಯಿಂದ ಬಳಲುವವರಲ್ಲಿ ಸೊಂಟ ನೋವು, ಬೆನ್ನು ನೋವು, ನಡೆಯಲು ತೊಂದರೆ, ಕೀಲುಗಳ ಬಿಗಿತ ಹಾಗೂ ಕಡಿಮೆ ಎತ್ತರದಂತಹ ಲಕ್ಷಣಗಳು ಕಂಡುಬರಬಹುದು. ಕೆಲವರಲ್ಲಿ ವಯಸ್ಸಿಗೆ ಮುನ್ನವೇ ಕೀಲು ಸವೆತದ ಸಮಸ್ಯೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಮೌನಿಕಾ ಬಿಂದು (ರೇಡಿಯೋ ಡಯಾಗ್ನೋಸಿಸ್), ಡಾ. ಜಯಂತ್ ಕಾಜಾ (ಅರ್ಥೋಪೆಡಿಕ್ ಸರ್ಜನ್), ಡಾ. ಪ್ರಿಯಾಂಕ ಕನ್ನಿ (ಅನೆಸ್ಥೀಷಿಯಾ) ಹಾಗೂ ಡಾ. ಅನಿಲ್ ಕಾಂಬಳೆ (ಜನರಲ್ ಮೆಡಿಸಿನ್) ಉಪಸ್ಥಿತರಿದ್ದರು.






