ಕಲಬುರಗಿ | ಯಡ್ರಾಮಿಯಲ್ಲಿ ಇಳಿಕೆಯಾದ ತಾಪಮಾನ

ಕಲಬುರಗಿ: ಯಡ್ರಾಮಿ ತಾಲೂಕಿನಲ್ಲಿ ಉಷ್ಣಾಂಶ ಕ್ರಮೇಣ ಇಳಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಪರದಾಡುವಂತಾಗಿದೆ. ವಾರದಲ್ಲಿ 12-13 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಇದರೊಂದಿಗೆ ಯಡ್ರಾಮಿಯಲ್ಲಿ ಬೆಳಗ್ಗೆ ಮಂಜುಕವಿದ ವಾತಾವರಣ ನಿರ್ಮಾಣವಾಗುತ್ತಿದೆ.
ಹಗಲು ಹೊತ್ತಿನಲ್ಲಿ ಬಿಸಿಲಿದ್ದರೂ ರಾತ್ರಿ ಹಾಗೂ ಬೆಳಗಿನ ಜಾವದ ಚಳಿಯಿಂದಾಗಿ ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಿಂದ ಚಳಿಯ ಅನುಭವವಾಗುತ್ತದೆ. ಆದರೆ ಈ ವರ್ಷ ನವೆಂಬರ್ ಎರಡನೇ ವಾರದಿಂದಲೇ ಚಳಿ ಶುರುವಾಗಿದೆ. ಕನಿಷ್ಠ ತಾಪಮಾನ ದಾಖಲಾಗುತ್ತಿರುವ ಕಾರಣ ಮುಸುಕಿನ ವಾತಾವರಣ ರೂಪುಗೊಳ್ಳುತ್ತಿದೆ.
ನಿತ್ಯವೂ ಬೆಳಗ್ಗೆ, ರಾತ್ರಿ ವೇಳೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಇದು ಜನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಬೇಗನೆ ಸೂರ್ಯಾಸ್ತ ಆಗುತ್ತಿರುವುದರಿಂದ ಹಗಲು ಪ್ರಮಾಣ ಕಡಿಮೆಯಾಗಿ ಕತ್ತಲಿನ ಅವಧಿ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆ ಬಿಸಿಲು ಜೋರಾಗಿದ್ದರೂ ಮನೆಯೊಳಗೆ ಚಳಿಯ ವಾತಾವರಣವೇ ಇರುತ್ತದೆ. ಹೀಗಾಗಿ ಚಳಿಯ ಅವಧಿಯೂ ಹೆಚ್ಚಾಗಿದೆ. ಹಾಗಾಗಿ ವಾಯು ವಿಹಾರ ಮಾಡುವ ಕೆಲಸ, ಕಾರ್ಯಗಳಿಗೆ ತೆರಳುವವವರ ಆರೋಗ್ಯದಲ್ಲಿ ಏರು, ಪೇರಾಗುವ ಸಾಧ್ಯತೆ ಹೆಚ್ಚಿದೆ. ನವೆಂಬರ್ ಮೊದಲ ವಾರದಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಗರಿಷ್ಠ 33-35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಪ್ರಸ್ತುತ ಕನಿಷ್ಠ 12-13 ಡಿಗ್ರಿ, ಗರಿಷ್ಠ 28-29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಚ್ಚಗಿನ ಉಡುಪಿಗೆ ಮೊರೆ :
ಚಳಿಯಿಂದಾಗಿ ರಕ್ಷಿಸಿಕೊಳ್ಳಲು ರೈತರು, ಕೃಷಿ ಕಾರ್ಮಿಕರು ಸೇರಿದಂತೆ ವಿದ್ಯಾರ್ಥಿಗಳು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗಿದ್ದಾರೆ. ಕಂಬಳಿ, ಬ್ಲಾಂಕೆಟ್, ದಪ್ಪನೆಯ ರಗ್ಗುಗಳು, ಸ್ವೆಟರ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ.







