Kalaburagi | ಭೀಕರ ರಸ್ತೆ ಅಪಘಾತ: ತಾಯಿ, ಮಗು ಮೃತ್ಯು

ಸಾಂದರ್ಭಿಕ ಚಿತ್ರ
ಕಲಬುರಗಿ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗು ಮೃತಪಟ್ಟು, ಕುಟುಂಬದ ಇನ್ನಿಬ್ಬರು ಗಾಯಗೊಂಡಿರುವ ದುರ್ಘಟನೆ ನದಿಸಿನ್ನೂರ ಗ್ರಾಮದ ಬಳಿ ಸೋಮವಾರ ನಡೆದಿದೆ.
ಬೀದರ್ ಮೂಲದ ಬಟ್ಟೆ ವ್ಯಾಪಾರಿ ಪಿರೋಝ್ ಖಾನ್ (34) ಅವರು ವ್ಯಾಪಾರದ ನಿಮಿತ್ತ ಜೇವರ್ಗಿಗೆ ಬಂದಿದ್ದರು. ಬಳಿಕ ತಮ್ಮ ಗರ್ಭಿಣಿ ಪತ್ನಿ ಪ್ರವೀದ್ ಶೇಖ್ (32) ಅವರನ್ನು ತಪಾಸಣೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಕೂಟರ್ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಅಭಿಷಾನ್ (2) ಮತ್ತು ನಾಝಿಯಾ (5) ಜೊತೆಗೆ ಪ್ರಯಾಣಿಸುತ್ತಿದ್ದಾಗ, ನದಿಸಿನ್ನೂರ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪ್ರವೀದ್ ಶೇಖ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಗು ಅಭಿಷಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯ ಮಧ್ಯೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಪಿರೋಝ್ ಖಾನ್ ಹಾಗೂ ಹಿರಿಯ ಮಗಳು ನಾಝಿಯಾ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಟ್ರಾಫಿಕ್-2 ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಜಪ್ತಿ ಮಾಡಿದ್ದಾರೆ. ಪರಾರಿಯಾಗಿರುವ ಕಾರು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







