ಕಲಬುರಗಿ| ಸಂವಿಧಾನ ಮಾತ್ರವೇ ಭಾರತಕ್ಕೆ ದಿಕ್ಸೂಚಿ ಗ್ರಂಥ : ಎಂ.ವೈ.ಪಾಟೀಲ

ಕಲಬುರಗಿ: "ಭಾರತ ಸಂವಿಧಾನಕ್ಕೆ ಯಾವುದೇ ಇನ್ನೊಂದು ಗ್ರಂಥ ಸರಿಸಮವಾಗಲು ಸಾಧ್ಯವಿಲ್ಲ. ಅದರಲ್ಲಿ ಭಾರತದ ಭವಿಷ್ಯವನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರರು ಕಟ್ಟಿ ಕೊಟ್ಟಿದ್ದಾರೆ. ಸಂವಿಧಾನ ದಾರಿ ತೋರಿದ ರೀತಿ ಈ ದೇಶ ನಡೆಯುತ್ತದೆ" ಎಂದು ಶಾಸಕರಾದ ಎಂ.ವೈ.ಪಾಟೀಲ ಹೇಳಿದರು.
ಬುಧವಾರ ಅಫಜಲಪುರ ಪಟ್ಟಣದಲ್ಲಿ ತಾಲೂಕು ಆಡಳಿತ, ಜಿಲ್ಲಾ ಪಂಚಾಯತ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ "ಸಂವಿಧಾನ ಸಮರ್ಪಣಾ ದಿನ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ಕೊಟ್ಟು ನಮ್ಮ ಬದುಕನ್ನು ಭದ್ರಗೊಳಿಸಿದೆ. ಆದ್ದರಿಂದ ನಾವು ಸಂವಿಧಾನವನ್ನು ರಕ್ಷಿಸುವ ಕರ್ತವ್ಯ ನಿಭಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡದ, ತಹಶೀಲ್ದಾರ್ ಸಂಜುಕುಮಾರ್ ದಾಸರ್ ಮಾತನಾಡಿದರು.
ಸಂವಿಧಾನ ಎಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ. 6 ರಿಂದ 14ನೇ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಟ್ಟಿದ್ದು ಸಂವಿಧಾನ. ಆದ್ದರಿಂದ ಸಂವಿಧಾನದ ಅರಿವು ಮೂಡಿಸುವ ಕಾರ್ಯ ಮಕ್ಕಳಿದ್ದಾಗಿನಿಂದಲೇ ಆರಂಭವಾಗಬೇಕು ಎಂದರು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಹಾಲಿಂಗ ಅಂಗಡಿ, ಭೀಮರಾಯ ಗೌರ್, ಶಿವು ಸಿಂಗೆ, ಭಾಗಣ್ಣಾ ಮತ್ತು ಇತರರು ಉಪಸ್ಥಿತರಿದ್ದರು.







