Kalaburagi | ಹಿಂದಿ ಭಾಷೆ ಉದ್ಯೋಗದ ಹಲವು ಅವಕಾಶಗಳ ಬಾಗಿಲು ತೆರೆಯುತ್ತದೆ: ಡಾ. ರಾಮಲಿಂಗ ಬೋಸ್ಲೆ

ಕಲಬುರಗಿ: ಇಂದಿನ ಜಾಗತೀಕರಣದ ಯುಗದಲ್ಲಿ ಹಿಂದಿ ಭಾಷೆ ಕೇವಲ ಸಂವಹನದ ಮಾಧ್ಯಮವಾಗಿ ಉಳಿದಿಲ್ಲ. ಯುವಜನತೆಗೆ ಉದ್ಯೋಗದ ಹಲವು ಅವಕಾಶಗಳ ಬಾಗಿಲು ತೆರೆಯುವ ಪ್ರಮುಖ ಭಾಷೆಯಾಗಿ ಹಿಂದಿ ಬೆಳೆದಿದೆ ಎಂದು ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಮಲಿಂಗ ಬೋಸ್ಲೆ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ‘ಹಿಂದಿ ಭಾಷೆ ಮತ್ತು ಉದ್ಯೋಗಾವಕಾಶ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಮಾತನಾಡಿದರು.
ಹಿಂದಿ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿರುವವರಿಗೆ ಅನುವಾದ ಕ್ಷೇತ್ರ, ಪತ್ರಿಕೋದ್ಯಮ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಬ್ಯಾಂಕಿಂಗ್, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಮಾಧ್ಯಮ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿನಿಯರು ಹಿಂದಿ ಭಾಷಾ ಕೌಶಲ್ಯದ ಜತೆಗೆ ತಮ್ಮ ಆಸಕ್ತಿಯ ಕ್ಷೇತ್ರಕ್ಕೆ ಅಗತ್ಯವಿರುವ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಆರ್.ಬಿ. ಕೊಂಡಾ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಸೆಯುವಲ್ಲಿ ಹಿಂದಿ ಭಾಷೆಯ ಪಾತ್ರ ಮಹತ್ವದ್ದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆಯ ಜತೆಗೆ ಹಿಂದಿ ಭಾಷೆಯ ಮೇಲಿನ ಉತ್ತಮ ಪ್ರಭುತ್ವ ಹೊಂದಿರುವುದು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ ಹೆಚ್ಚಿನ ಬಲ ನೀಡುತ್ತದೆ ಎಂದು ಹೇಳಿದರು.
ಹಿಂದಿ ದಿವಸದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಂತರಮಹಾವಿದ್ಯಾಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳ ಮೂಲಕ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಚಂದ ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ದಿವಸ ಆಚರಣೆಯ ಮಹತ್ವ ಹಾಗೂ ಇಂದಿನ ಕಾಲಘಟ್ಟದಲ್ಲಿ ಭಾಷಾ ಕೌಶಲ್ಯದ ಅಗತ್ಯತೆಯ ಕುರಿತು ವಿವರಿಸಿದರು.
ಕವಿತಾ ಠಾಕೂರ್ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಕುಲಕರ್ಣಿ ವಂದಿಸಿದರು. ಶೆರಿಯಲ್ ಪ್ರಾರ್ಥನಾ ಗೀತೆ ಹಾಡಿದರು.
ಸಮಾರಂಭದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗಂವ್ಹಾರ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸುಭಾಶ್ಚಂದ್ರ ದೊಡ್ಡಮನಿ, ಡಾ. ಮೊಹ್ಸಿನಾ ಫಾತಿಮಾ, ಡಾ. ಶ್ರೀದೇವಿ ಸರಡಗಿ, ಗೀತಾ ಪಾಟೀಲ್, ಡಾ. ನಾಗರತ್ನ, ರತ್ನಾ ಪ್ಯಾಟಿ, ಡಾ. ಕನ್ಯಾಕುಮಾರಿ, ಸಂಗಮೇಶ ತುಪ್ಪದ, ಶ್ವೇತಾ ಕೋಟೆ, ಶಿವಲೀಲಾ ಧೋತ್ರೆ, ಬಸಮ್ಮ ಗೊಬ್ಬುರ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






