Kalaburagi | ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವಪೀಳಿಗೆಗೆ ತಿಳಿಸಬೇಕು: ಡಾ.ಫಾರುಕ್ ಮಣ್ಣೂರ

ಕಲಬುರಗಿ: ಬ್ರಿಟಿಷರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸಲು ಕ್ರಾಂತಿಕಾರಿಗಳು ಹಾಗೂ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ನಡೆಸಿದ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಇತಿಹಾಸವನ್ನು ಪ್ರತಿಯೊಬ್ಬ ಯುವಕರಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದು ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1945ರಲ್ಲಿ ನೌಕಾಪಡೆ ಹಾಗೂ ಜಮಾಲಪುರದಲ್ಲಿ ಭೂಸೇನೆಯ ಸೈನಿಕರು ಬ್ರಿಟಿಷರ ವಿರುದ್ಧ ನಡೆಸಿದ ಕಾರ್ಯಾಚರಣೆಗಳಿಂದ ಬ್ರಿಟಿಷರಲ್ಲಿ ನಡುಕು ಉಂಟಾಗಿತ್ತು. ಇಂದು ವಿಶ್ವದಲ್ಲಿ ಶಾಂತಿ ಕಾಪಾಡುವಲ್ಲಿ ಭಾರತೀಯ ಸೈನಿಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸೈನಿಕರು ಕೇವಲ ಗಡಿ ರಕ್ಷಣೆಗೆ ಸೀಮಿತವಾಗದೆ, ವಿಶ್ವ ಶಾಂತಿ ಕಾಪಾಡುವ ಕಾರ್ಯದಲ್ಲೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಹೋರಾಡಿದ ಮಹನೀಯರ ತ್ಯಾಗ–ಬಲಿದಾನಗಳನ್ನು ಸ್ಮರಿಸುವುದರ ಜೊತೆಗೆ, ಭಾರತದ ಸಾರ್ವಭೌಮತೆ ಹಾಗೂ ಏಕತೆಯನ್ನು ರಕ್ಷಿಸುವ ದೃಢ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಾಬುಮಿಯ್ಯ ಮಣ್ಣೂರ, ಶರಣಬಸಪ್ಪ ಖೇಣಿ, ಹರ್ಷಾ, ಅಮೀರ ನಿಂಬಾಳಕರ, ಇಸ್ಮಾಯಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






